ಕೊಲ್ಕತಾ: ಭಾರತದಲ್ಲಿ ಮದುವೆ ಊಟಕ್ಕೆ ಇರುವ ಮಹತ್ವ ಅಷ್ಟಿಷ್ಟಲ್ಲ. ಆದರೆ ಆಹಾರವು ಅತ್ಯಂತ ಹೆಚ್ಚಾಗಿ ವ್ಯರ್ಥವಾಗುವುದೂ ಮದುವೆ ಸಮಾರಂಭಗಳಲ್ಲೇ ಎಂದೂ ಹೇಳಬಹುದು. ಹೀಗೆ ವ್ಯರ್ಥವಾಗುತ್ತಿದ್ದ ಮದುವೆಯ ಊಟವನ್ನು ಮಹಿಳೆಯೊಬ್ಬರು, ಮಧ್ಯರಾತ್ರಿ ತೆಗೆದುಕೊಂಡು ಹೋಗಿ ರೈಲ್ವೇ ಪ್ಲಾಟ್ಫಾರಂನಲ್ಲಿ ಬಡವರಿಗೆ ಹಂಚಿರುವ ಪ್ರಸಂಗ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ರೇಷ್ಮೆ ಸೀರೆಯುಟ್ಟು, ಆಭರಣಗಳನ್ನು ತೊಟ್ಟ ಮಹಿಳೆಯೊಬ್ಬರು ಕೊಲ್ಕತಾ ಸಬ್ಅರ್ಬನ್ ರೈಲ್ವೇ ಸ್ಟೇಷನ್ನ ರಾಣಾಘಟ್ ಜಂಕ್ಷನ್ನಲ್ಲಿ ಡಿ.4 ರ ಮಧ್ಯರಾತ್ರಿ 1 ಗಂಟೆಗೆ ಪಾಪಿಯ ಕರ್ ಎಂಬ ಮಹಿಳೆ ಹಸಿದವರ ಹೊಟ್ಟೆ ತಣ್ಣಗಾಗಿಸಿದ್ದಾರೆ. ತಮ್ಮ ಸೋದರನ ಮದುವೆಯ ಸಮಾರಂಭದಲ್ಲಿ ಅತಿಥಿಗಳ ಊಟವೆಲ್ಲಾ ಮುಗಿದ ನಂತರ ಉಳಿದಿದ್ದ ಭಾರೀ ಪ್ರಮಾಣದ ಊಟವನ್ನು ಪೇಪರ್ ಪ್ಲೇಟ್ಗಳ ಮೇಲೆ ಖುದ್ದು ಬಡಿಸಿಕೊಟ್ಟಿದ್ದಾರೆ. ದಾಲ್, ರೋಟಿ, ಸಬ್ಜಿ ಮತ್ತು ಅನ್ನದ ವಿಶೇಷ ತಿನಿಸುಗಳನ್ನು ಸವಿದ ಬಡಜನರು ಅವರನ್ನು ಮನಸಾರೆ ಹರಸಿದ್ದಾರೆ.
ವೆಡ್ಡಿಂಗ್ ಫೋಟೋಗ್ರಾಫರ್ ನೀಲಾಂಜನ್ ಮೊಂಡಲ್ ಈ ಮಹಿಳೆಯ ಚಿತ್ರವನ್ನು ತಮ್ಮ ಫೇಸ್ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮಾನವೀಯ ಕೆಲಸದ ಬಗ್ಗೆ ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಸಮಾಜದ ಪ್ರತಿಯೊಬ್ಬರಲ್ಲೂ ಇಂಥ ಕಳಕಳಿ ಬಂದಲ್ಲಿ ಎಷ್ಟು ಚೆನ್ನಾಗಿರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)