ಸೊರಬ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಪ್ರಭುಮೇಸ್ತ್ರಿ, ಉಪಾಧ್ಯಕ್ಷೆ ಶ್ರೀರಂಜಿನಿ, ಮುಖ್ಯಾಧಿಕಾರಿ ಚಂದನ್, ಅನ್ಸರ್ ಅಹ್ಮದ್, ಪ್ರೇಮಾ ಇತರರಿದ್ದರು. 
ನ್ಯೂಸ್

ಡಿಸಿಗೆ ಕ್ರಿಯಾಯೋಜನೆ ಸಲ್ಲಿಸಲು ನಿರ್ಧಾರ

ಶಿವಕುಮಾರ ಎಸ್.ಪಿ.

ಸೊರಬ: ಹದಿನೈದನೇ ಹಣಕಾಸು ಯೋಜನೆಯಡಿ 1.30 ಕೋಟಿ ರೂ. ಎಸ್‌ಎಫ್‌ಸಿ ಅನುದಾನ ಹಾಗೂ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ 21 ಲಕ್ಷ ರೂ. ಅನುದಾನಕ್ಕೆ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿ ಅನುಮೋದನೆಗೆ ಕಳಿಸಲು ಸೋಮವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಬಳಿಕ ಕೆಲವು ವಿಷಯಗಳನ್ನು ಅನುಮೋದನೆ ಪಡೆದರೆ ಮತ್ತೆ ಕೆಲವು ವಿಷಯಗಳನ್ನು ಕೈಬಿಡಲಾಯಿತು.

ಪಟ್ಟಣದಲ್ಲಿ ನಿರ್ಮಾಣವಾಗಿರುವ ಸಂತೆ ಮಾರುಕಟ್ಟೆ ಮತ್ತು ಉದ್ಯಾನವನ್ನು ಪುರಸಭೆ ಸುಪರ್ದಿಗೆ ತೆಗೆದುಕೊಳ್ಳುವಂತೆ ಪಿಡಬ್ಲುೃಡಿಯಿಂದ ಪತ್ರ ಬಂದಿದ್ದು, ಈ ಬಗ್ಗೆ ಚರ್ಚೆ ನಡೆಸಲಾಯಿತು. ಎಂ.ಡಿ.ಉಮೇಶ್ ಮಾತನಾಡಿ, ಕಟ್ಟಡ ನಿಮಾಣವಾಗಿದೆ ಅಷ್ಟೆ. ಆದರೆ ಸ್ವಚ್ಛತೆ ಹಾಗೂ ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿಲ್ಲ. ಪಾರ್ಕ್ ಕೂಡ ಇಲ್ಲ. ಕೋಟ್ಯಂತರ ರೂ. ವೆಚ್ಚವಾಗಿದೆ. ಆದರೂ ಕಟ್ಟಡ ಸರಿಯಾಗಿಲ್ಲ ಎಂದು ದೂರಿದರು. ನಂತರ ಚರ್ಚೆ ನಡೆದು ಸದ್ಯಕ್ಕೆ ಸಪರ್ದಿಗೆ ತೆಗೆದುಕೊಳ್ಳುವುದು ಬೇಡ ಎಂದು ತೀರ್ಮಾನಿಸಲಾಯತು.

ಮಳೆಗಾಲದಲ್ಲಿ ಪಟ್ಟಣದ ಶ್ರೀ ರಂಗನಾಥ ದೇವಾಲಯದ ಛಾವಣಿಯಿಂದ ನೀರು ಸೋರುತ್ತದೆ. ಮಳೆಗಾಲದಲ್ಲಿ ಭಕ್ತರಿಗೆ ಕಿರಿಕಿರಿಯಾಗುತ್ತದೆ. ದುರಸ್ತಿಗೆ ಪುರಸಭೆಯಿಂದ ಅನುದಾನ ಭರಿಸುವಂತೆ ಪ್ರಸನ್ನಕುಮಾರ್ ಮನವಿ ಮಾಡಿದರು. ಎಲ್ಲ ಸದಸ್ಯರು ಒಕ್ಕೊರಲಿಂದ ತಮ್ಮ ಪಾಲಿನ ಅನುದಾನ ನೀಡುವ ಮೂಲಕ 2.64 ಲಕ್ಷ ರೂ.ಗೆ ಒಪ್ಪಿಗೆ ಪಡೆಯಲಾಯಿತು.

ಪಟ್ಟಣದಲ್ಲಿರುವ ಭೂತನಕಟ್ಟೆ, ಅರಳಿಕಟ್ಟೆ ಹಾಗೂ ಬಾವಿಗಳನ್ನು ಸರ್ವೇ ಮಾಡಿಸಬೇಕು. ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ ತಂತಿಬೇಲಿ ಹಾಕಿಸುವಂತೆ ಮುಖ್ಯಾಧಿಕಾರಿ ಚಂದನ್‌ಗೆ ಅಧ್ಯಕ್ಷ ಪ್ರಭು ಮೇಸ್ತ್ರಿ ಸೂಚಿಸಿದರು.

ಸಭೆಯಲ್ಲಿ ಕೈಗೊಂಡ ನಿರ್ಣಯ: ಶೇ.5ರ ಅಂಗವಿಕಲರ ಕಲ್ಯಾಣ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ನೀಡಲು ಫಲಾನುಭವಿಗಳ ಆಯ್ಕೆ, ಶೇ.24 ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಕಾರ್ಯಕ್ರಮದಡಿ ಅಂಗವಿಕಲರಿಗೆ ಅಡುಗೆ ಅನಿಲ ಸಂಪರ್ಕ, ಎಸ್‌ಎಂಬಿ ಯೋಜನೆಯಡಿ ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೆ ಸಹಾಯಧನ, ಶೇ.5ರ ಅನದುನದಲ್ಲಿ ಅಂಗವಿಕಲರ ಕಲ್ಯಾಣದಡಿ ಶೌಚಗೃಹ ನಿರ್ಮಾಣ, ಆಸ್ತಿ ತೆರೆಗೆ ಶೇ.2ರಷ್ಟು ಹೆಚ್ಚಳ, ಪುರಸಭೆ ವ್ಯಾಪ್ತಿಯಲ್ಲಿ ಮಳೆ ನೀರು ನಿಲ್ಲುವ ಜಾಗದಲ್ಲಿ ಕಾಲುವೆ ತೆಗೆಸುವುದು, ಪುರಸಭೆ ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳ ಕಡಿತಲೆ ಮಾಡಲು ಅರಣ್ಯ ಇಲಾಖೆಯಿಂದ ಅನುಮೋದನೆ ಪಡೆಯಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪುರಸಭೆ ಉಪಾಧ್ಯಕ್ಷೆ ಶ್ರೀರಂಜಿನಿ, ಸದಸ್ಯರಾದ ಮಧುರಾಯಿಜೀ ಶೇಠ್, ಅನ್ಸರ್ ಅಹ್ಮದ್, ಪ್ರೇಮಾ, ವಿಜಯಲಕ್ಷ್ಮೀ, ಆಫ್ರೀನಾ ಬಾನು, ಸುಲ್ತಾನ ಬೇಗಂ, ಪ್ರಸನ್ನಕುಮಾರ, ವೀರೇಶ್ ಮೇಸ್ತ್ರಿ ಇತರರಿದ್ದರು.