ನ್ಯೂಸ್

ದರ್ಶನ್‌ನನ್ನು ಮೊದಲ ಆರೋಪಿ ಮಾಡಲು ತೀರ್ಮಾನ?

ಮಂಜುನಾಥ.ಕೆ

ಬೆಂಗಳೂರು: ನಟ ದರ್ಶನ್‌ರನ್ನು ಪ್ರಕರಣದ ಮೊದಲ ಆರೋಪಿಯಾಗಿ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ದರ್ಶನ್ ಅವರಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಲಿದೆ.
ರೇಣುಕಸ್ವಾಮಿ ಕೊಲೆ ಸಂಗತಿ ಬೆಳಕಿಗೆ ಬಂದ ಬೆನ್ನಲ್ಲೇ ತನಿಖೆ ಆರಂಭಿಸಿದ್ದ ಪೊಲೀಸರು ದರ್ಶನ್‌ರನ್ನು ಎರಡನೇ ಆರೋಪಿಯಾಗಿ ಮತ್ತು ಅವರ ಸ್ನೇಹಿತೆ ಪವಿತ್ರಾಗೌಡರನ್ನು ಮೊದಲ ಆರೋಪಿಯಾಗಿ ಪರಿಗಣಿಸಿದ್ದರು. ಪವಿತ್ರಾಗೌಡ ಅವರ ಪ್ರಚೋದನೆಯ ಕಾರಣದಿಂದಲೇ ರೇಣುಕಸ್ವಾಮಿ ಕೊಲೆ ನಡೆದ ಶಂಕೆಯಿದ್ದ ಕಾರಣಕ್ಕೆ ಅವರನ್ನು ಮೊದಲ ಆರೋಪಿಯಾಗಿ ಪರಿಗಣಿಸಲಾಗಿತ್ತು. ಆದರೆ, ತನಿಖೆ ಮುಂದುವರಿದಂತೆ ದರ್ಶನ್‌ರ ವಿರುದ್ಧ ಸಾಕಷ್ಟು ಪ್ರಬಲ ಸಾಕ್ಷ್ಯಾಧಾರಗಳು ಸಿಕ್ಕಿವೆ. ತೆಗೆ, ದರ್ಶನ್‌ರ ಅಣತಿಯಂತೆ ಇತರೆ ಆರೋಪಿಗಳು ರೇಣುಕಸ್ವಾಮಿಯನ್ನು ಅಪಹರಿಸಿ ಹಲ್ಲೆ ಮಾಡಿ ಹತ್ಯೆ ನಡೆಸಿದ್ದಕ್ಕೆ ಸಾಕ್ಷಿಗಳು ಸಿಕ್ಕಿವೆ. ಕೊಲೆ ಬಳಿಕ ಶವ ವಿಲೇವಾರಿಗೂ ದರ್ಶನ್ ಹಣ ಕೊಟ್ಟಿದ್ದ ಸಂಗತಿ ತನಿಖೆಯಲ್ಲಿ ದೃಢಪಟ್ಟಿದೆ. ಎಲ್ಲಾ ಪ್ರಮುಖ ಸಾಕ್ಷಿಗಳು ದರ್ಶನ್‌ರ ವಿರುದ್ಧವಾಗಿ ಇರುವುದರಿಂದ ಅವರನ್ನೇ ಪ್ರಕರಣದ ಮೊದಲ ಆರೋಪಿಯಾಗಿ ಮಾಡಲು ಪೊಲೀಸರು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.
ದರ್ಶನ್‌ರನ್ನು ಎರಡನೇ ಆರೋಪಿ ಬದಲಿಗೆ ಮೊದಲ ಆರೋಪಿಯಾಗಿ ಮಾಡಿ ದೋಷಾರೋಪಣಾ ಪಟ್ಟಿ ಸಲ್ಲಿಸಲು ಪೊಲೀಸರು ಅಂತಿಮ ಸಿದ್ಧತೆ ನಡೆಸಿದ್ದಾರೆ. ಇದು ಖಚಿತವಾದರೆ ದರ್ಶನ್ ಅವರೇ ರೇಣುಕಸ್ವಾಮಿ ಕೊಲೆಯ ಸೂತ್ರಧಾರ ಆಗಲಿದ್ದು, ಅವರಿಗೆ ಶಿಕ್ಷೆಯ ಪ್ರಮಾಣ ಹೆಚ್ಚಾಗಲಿದೆ.