ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಡಿ.13ರಂದು ಬೆಳಗಾವಿ ಸುವರ್ಣ ಸೌಧದ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ ಎಂದು ನವಕರ್ನಾಟಕ ಅಂಗವಿಕಲರ ಗೌರವಧನ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷೆ ಯಶೋದಾ ತಿಳಿಸಿದರು.
ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣದ ಇಲಾಖೆಯಿಂದ 17 ವರ್ಷಗಳ ಹಿಂದೆ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಗಿತ್ತು. ಇದರಲ್ಲಿ ಎಂಆರ್‌ಡಬ್ಲುೃ, ವಿಆರ್‌ಡಬ್ಲುೃ, ಯುಆರ್‌ಡಬ್ಲುೃ ಎಂದು ವಿಂಗಡಣೆ ಮಾಡಿ ಮಾಸಿಕ 9 ರಿಂದ 15 ಸಾವಿರ ರೂ.ವರೆಗೆ ಗೌರವಧನ ನೀಡಲಾಗುತ್ತಿದೆ. ಇದು ತುಂಬ ಕಡಿಮೆಯಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸುಮಾರು 21 ಬಗೆಯ ಅಂಗವಿಕರು ಹಾಗೂ ಹಿರಿಯ ನಾಗರಿಕರನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳನ್ನು ಇವರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಕಾರ್ಯಕರ್ತರದು. ಗ್ರಾಪಂ ಹಾಗೂ ನಗರ ಮಟ್ಟದಲ್ಲಿ ಇವರೆಲ್ಲ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 285 ಹಾಗೂ ರಾಜ್ಯದಲ್ಲಿ 6,880 ಮಂದಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
17 ವರ್ಷಗಳಿಂದ ಸೇವಾ ಭದ್ರತೆಯಿಲ್ಲ. ಕನಿಷ್ಠ ವೇತನ, ಪಿಎಫ್, ಇಎಸ್‌ಐ ಇಲ್ಲದಂತಾಗಿದೆ. ನಮ್ಮ ಸೇವೆ ಕಾಯಂ ಮಾಡುವವರೆಗೆ ಮಾಸಿಕ 35 ಸಾವಿರ ರೂ. ನೀಡಬೇಕು. ಎಲ್ಲ ಕಾನೂನುಬದ್ಧ ಸವಲತ್ತು ನೀಡಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಸಂಘದ ಪ್ರಮುಖರಾದ ಶ್ರೀಕಾಂತ್, ಕೃಷ್ಣ ನಾಯಕ್, ಬಸವಕುಮಾರ್, ಶೇಖರಪ್ಪ, ಲಕ್ಷ್ಮಣ್, ಯುವರಾಜ್, ಗಜೇಂದ್ರ, ಗಂಗಾಧರ್, ಚಂದ್ರಯ್ಯ, ಪರಮೇಶ್ವರಪ್ಪ ಇತರರಿದ್ದರು.