ಬೆಂಗಳೂರು: ದಕ್ಷಿಣದ ರಣಯುದ್ಧ ಮುಗಿದಿದೆ. ಇನ್ನೇನಿದ್ದರೂ ರಾಜಕೀಯ ಉತ್ತರದ ಕಡೆ ದಾಳಿ ಇಟ್ಟಿದೆ. ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭೆ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ರಾಜಕಾರಣಿಗಳು ಕಿತ್ತೂರು ಕರ್ನಾಟಕ/ಕಲ್ಯಾಣ ಕರ್ನಾಟಕಕ್ಕೆ ಶ್‌ಟಿ ಆಗಿದ್ದಾರೆ. 2ನೇ ಹಂತದ ಚುನಾವಣೆಯ ಪ್ರಚಾರದಲ್ಲಿ ಬ್ಯೂಸಿ ಆಗಿದ್ದಾರೆ.
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನಾಯಕರು ಕೂಡ ಕಿತ್ತೂರು/ಕಲ್ಯಾಣ ಕರ್ನಾಟಕದಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇದ್ದರೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಹೆಗಲುಕೊಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿ.ಎಂ. ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಆಖಾಡಕ್ಕಿಳಿದಿದ್ದಾರೆ.
ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಪ್ಕಷದ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಚಿಕ್ಕೋಡಿಯಲ್ಲಿ ನಡೆಯುವ ಬಹಿರಂಗ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಹೊಸಪೇಟೆಯಲ್ಲಿ ಭಾನುವಾರ ಸಂಜೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಈ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ.
ಅಲ್ಲದೆ, ಕಿತ್ತೂರು/ಕಲ್ಯಾಣ ಕರ್ನಾಟಕದ ಭಾಗದಲ್ಲಿ ಯಾವ ರೀತಿಯ ಚುನಾವಣಾ ರಣತಂತ್ರ ರೂಪಿಸಬೇಕು ಎಂದು ಚರ್ಚಿಸಲು ಹುಬ್ಬಳ್ಳಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಸಲು ಜೆಡಿಎಸ್ ನಿರ್ಧರಿಸಿದೆ.
ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಚಿವರ ಪುತ್ರ/ಪುತ್ರಿಯನ್ನೇ ಕಣಕ್ಕಿಳಿಸಿದ್ದು, ಈ ಚುನಾವಣೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ತಮ್ಮ ಮಕ್ಕಳನ್ನು ಗೆಲ್ಲಿಸಿಕೊಂಡು ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಈ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ಪ್ರಚಾರ ನಡೆಸಲಿದ್ದಾರೆ.
ದಕ್ಷಿಣ ಕರ್ನಾಟಕಕ್ಕಿಂತಲೂ 3-4 ಡಿಗ್ರಿ ಸೆಲ್ಸಿಯಸ್ ಬಿಸಿಲು ಕಿತ್ತೂರು/ಕಲ್ಯಾಣ ಕರ್ನಾಟಕದಲ್‌ಇಲ ಹೆಚ್ಚಿರುವುದರಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರವಾಸದ ರೂಪುರೇಷೆ ಇನ್ನೂ ಸಿದ್ಧಗೊಂಡಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ದೇವೇಗೌಡರು ಬಹಿರಂಗ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಯಚೂರು, ಕೊಪ್ಪಳ, ಬೀದರ್, ಕಲಬರುಗಿ, ವಿಜಯಪುರ, ಶಿವಮೊಗ್ಗೆ ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಭಾವ ಹೆಚ್ಚಿದ್ದು, ಈ ಕ್ಷೇತ್ರಗಳಲ್ಲಿ ಜೆಡಿಎಸ್ ನಾಯಕರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ಸ್ಕೆಚ್ ಹಾಕಿದೆ.