ಕೆ.ಆರ್.ಪೇಟೆ: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜುಲೈ 1 ರಂದು ಪಟ್ಟಣಕ್ಕೆ ಆಗಮಿಸಲಿದ್ದು ಪಕ್ಷದ ಯುವ ನಾಯಕನನ್ನು ಅದ್ದೂರಿಯಾಗಿ ಸ್ವಾಗತಿಸಲು ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ನಿರ್ಧರಿಸಲಾಯಿತು.
ಪಕ್ಷದ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಶಾಸಕ ಎಚ್.ಟಿ.ಮಂಜು ಗೃಹ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಜೆಡಿಎಸ್ ರೈತರ ಪಕ್ಷ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಎಲ್ಲರೂ ಸದಾ ದೇಶದ ಅನ್ನದಾತರ ಸಮಸ್ಯೆಗಳ ಪರಿಹಾರಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪಕ್ಷವನ್ನು ನಂಬಿರುವ ನಾಡಿನ ರೈತರು ಮತ್ತು ಯುವ ಸಮುದಾಯವನ್ನು ಉಳಿಸಬೇಕಾದರೆ ಪಕ್ಷ ತಳಮಟ್ಟದಲ್ಲಿ ಮತ್ತಷ್ಟು ಶಕ್ತಿಯುತವಾಗಬೇಕು. ಪಕ್ಷದ ಸಂಘಟನೆಗಾಗಿ ನಿಖಿಲ್ ಸುದೀರ್ಘ 58 ದಿನಗಳ ಕಾಲ ನಿರಂತರವಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ನಿಖಿಲ್ ಪ್ರಬುದ್ಧ ರಾಜಕಾರಣಿಯಾಗಿ ಹೊರಹೊಮ್ಮಿದ್ದು ರಾಜ್ಯದ ಜನ ಅವರ ಮೇಲೆ ಭರವಸೆ ಹೊಂದಿದ್ದಾರೆ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗಟ್ಟಿಯಾಗಿದ್ದು ನಿಖಿಲ್ ಕಾರ್ಯಕ್ರಮಕ್ಕೆ ಹಣ ಕೊಟ್ಟು ಜನರನ್ನು ಕರೆತರುವುದು ಬೇಡ. ಬದಲಾಗಿ ಪ್ರತಿಯೊಬ್ಬ ಕಾರ್ಯಕರ್ತನೂ ಸಂಪೂರ್ಣ ಜವಾಬ್ದಾರಿ ಹೊತ್ತು ತಮ್ಮ ತಮ್ಮ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತರುವ ಮೂಲಕ ನಿಖಿಲ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪಕ್ಷದ ಮುಖಂಡರಾದ ವಕೀಲ ಧನಂಜಯ, ತಾ.ಪಂ ಮಾಜಿ ಸದಸ್ಯ ಬೂಕನಕೆರೆ ಹುಲ್ಲೇಗೌಡ ಸೇರಿದಂತೆ ಹಲವರು ಮಾತನಾಡಿ, ಪಕ್ಷ ಸಂಘಟನೆಯ ದೃಷ್ಟಿಯಿಂದ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಅವರನ್ನು ಬದಲಿಸಿ ಮತ್ತೊಬ್ಬ ಸಕ್ರಿಯ ಅಧ್ಯಕ್ಷರನ್ನು ನೇಮಕ ಮಾಡುವಂತೆ ಆಗ್ರಹಿಸಿದರು.
ಸಭೆಯಲ್ಲಿ ರಾಜ್ಯ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕ ಎಸ್.ಎಲ್.ಮೋಹನ್, ಅಕ್ಕಿಹೆಬ್ಬಾಳು ರಘು, ತಾಪಂ ಮಾಜಿ ಸದಸ್ಯರಾದ ಮಲ್ಲೇನಹಳ್ಳಿ ಮೋಹನ್, ವಿ.ಎಂ.ಮಹದೇವೇಗೌಡ, ತೋಟಪ್ಪಶೆಟ್ಟಿ, ಬಿ.ಎಂ.ಕಿರಣ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಆಯ್ಕೆ: ತಾಲೂಕು ಜೆಡಿಎಸ್ ರೈತ ಮೋರ್ಚಾ ಘಟಕದ ಅಧ್ಯಕ್ಷರಾಗಿ ತಾಪಂ ಮಾಜಿ ಸದಸ್ಯ ಬೂಕನಕೆರೆ ಹುಲ್ಲೇಗೌಡ ಮತ್ತು ಕಾರ್ಯಾದ್ಯಕ್ಷರಾಗಿ ಬ್ಯಾಲದಕೆರೆ ನಂಜಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.