ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿ. 
ನ್ಯೂಸ್

ಸಾಮಾನ್ಯ ಸಭೆ ಬಹಿಷ್ಕರಿಸಲು ನಿರ್ಧಾರ?

ತೀರ್ಥಹಳ್ಳಿ: ಕಾಂಗ್ರೆಸ್ ಆಡಳಿತವಿರುವ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯನ್ನು ಜು.31ರಂದು ಕರೆಯಲಾಗಿದೆ. ಆದರೆ ಸ್ವಪಕ್ಷೀಯ 10 ಮಂದಿ ಸದಸ್ಯರು ಸಭೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಈ ಬೆಳವಣಿಗೆಗೆ ಕಾರಣವಾಗಿದೆ. ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಅವರು ಅಧಿಕಾರ ಹಂಚಿಕೆ ಸೂತ್ರದಂತೆ ಪಕ್ಷದ ತೀರ್ಮಾನದಂತೆ ನಡೆದುಕೊಳ್ಳದೆ ತಮಗೆ ನೀಡಿದ್ದ 8 ತಿಂಗಳ ಅವಧಿಯ ನಂತರವೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಿರುವುದು. ಪಕ್ಷದ ಪದಾಧಿಕಾರಿಗಳು ಕರೆದಿರುವ ಮೂರು ಸಭೆಗಳಿಗೂ ಹಾಜರಾಗದಿರುವುದು ಸದಸ್ಯರು ಹಾಗೂ ಪಕ್ಷದ ಪ್ರಮುಖರ ಅಸಮಾಧಾನಕ್ಕೆ ಕಾರಣವಾಗಿದೆ.

ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ. ಮಂಜುನಾಥ ಗೌಡ ಅವರ ತೀರ್ಮಾನದಂತೆಯೇ ರಹಮತ್ ಉಲ್ಲಾ ಅಸಾದಿಯವರಿಗೆ 8 ತಿಂಗಳ ಅಧ್ಯಕ್ಷ ಸ್ಥಾನದ ಅವಕಾಶ ನೀಡಲಾಗಿತ್ತು. ಇದೀಗ ಉದ್ದೇಶಪೂರ್ವಕವಾಗಿ ಸದಸ್ಯರು ಯಾರಿಗೂ ಸಿಗದಂತೆ ಓಡಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಇದು ಸದಸ್ಯರು ಸಭೆಯನ್ನು ಬಹಿಷ್ಕರಿಸಿದ್ದಾರೆ ಎಂಬುದಕ್ಕೆ ಪುಷ್ಟಿ ನೀಡುವಂತಿದೆ.

15 ಸದಸ್ಯ ಬಲದ ಪಪಂನಲ್ಲಿ ಕಾಂಗ್ರೆಸ್‌ನ 9 ಮಂದಿ ಚುನಾಯಿತ ಸದಸ್ಯರು, ಮೂವರು ನಾಮನಿರ್ದೇಶಿತ ಸದಸ್ಯರಿದ್ದಾರೆ. ಇವರಲ್ಲಿ ಸುಶೀಲಾ ಶೆಟ್ಟಿ ಒಬ್ಬರನ್ನು ಹೊರತುಪಡಿಸಿ ಉಳಿದವರು ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಸದಸ್ಯರ ಬಹಿಷ್ಕಾರದ ನಡುವೆಯೂ ಸಭೆಯನ್ನು ನಡೆಸಲಾಗುವುದು ಎಂಬ ಅಧ್ಯಕ್ಷರ ನಿರ್ಧಾರ ಸಹ ಕುತೂಹಲಕ್ಕೆ ಕಾರಣವಾಗಿದೆ.

ಎಲ್ಲ ಸದಸ್ಯರಿಗೂ ಒಂದು ವಾರ ಮುಂಚಿತವಾಗಿ ಸಭೆ ಬಗ್ಗೆ ನೋಟಿಸ್ ಕಳುಹಿಸಲಾಗಿದೆ. 10 ಮಂದಿ ಸದಸ್ಯರು ಮೂರು ದಿನಗಳ ಮುಂಚೆ ತಾವು ಪ್ರವಾಸ ಹೋಗುತ್ತಿರುವ ಕಾರಣ ಸಭೆ ಮುಂದೂಡುವಂತೆ ಪತ್ರ ಬರೆದಿದ್ದಾರೆ. ಸಭೆ ನಡೆಸಲು ಮೂರನೇ ಒಂದು ಪ್ರಮಾಣದ ಸದಸ್ಯರಿದ್ದರೆ ಸಾಕು. ಆದ್ದರಿಂದ ಸಭೆಯನ್ನು ಮುಂದೂಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ತಿಳಿಸಿದ್ದಾರೆ.