ಬೆಂಗಳೂರು: ವಕ್ಫ್ ಬೋರ್ಡ್‌ನಿಂದ ನೀಡುತ್ತಿರುವ ನೋಟಿಸ್ ವಿಚಾರವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುವ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ತೀರ್ಮಾನವೇ ಅಂತಿಮ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪರೋಕ್ಷವಾಗಿ ಭಿನ್ನಮತೀಯರಿಗೆ ತಿರುಗೇಟು ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಮಾನ್ಯತೆ ಇರುತ್ತದೆಯೇ ಹೊರತು ಬೇರೆಯವರು ಪ್ರವಾಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬೇರೆಯವರಂತೆ ನಾನು ಕೂಡ ಒಂದು ತಂಡವನ್ನು ತೆಗೆದುಕೊಂಡು ಪ್ರವಾಸ ಮಾಡುತ್ತೇನೆ ಎಂದರೆ ಹೈಕಮಾಂಡ್ ನಾಯಕರು ಅವಕಾಶ ಕೊಡುತ್ತದಾ? ಯಾವುದೇ ಕಾರಣಕ್ಕೂ ಪಕ್ಷದ ಚಿಹ್ನೆ ಹೊರತುಪಡಿಸಿ ನಡೆಯುವ ಪ್ರವಾಸ, ಹೋರಾಟ, ಪ್ರತಿಭಟನೆಗಳಿಗೆ ಅನುಮತಿ ನೀಡುವುದಿಲ್ಲ ಎಚ್ಚರಿಸಿದರು.
ರಾಜ್ಯಾಧ್ಯಕ್ಷರು ಯಾರಾಗಿರುತ್ತಾರೋ ಅವರ ನೇತೃತ್ವದಲ್ಲ ಹೋರಾಟಗಳು, ಪ್ರತಿಭಟನೆಗಳು ನಡೆಯಬೇಕು. ವಿಜಯೇಂದ್ರ ಹೋರಾಟ ಪ್ರಾರಂಭ ಮಾಡಿದ ಮೇಲೆ ಸರ್ಕಾರ ನೋಟಿಸ್ ನೀಡುವುದನ್ನು ಹಿಂಪಡೆದಿದೆ. ಹೀಗಾಗಿ ಬೇರೆಯವರಿಗೆ ಪ್ರತ್ಯೇಕ ತಂಡ ಮಾಡಲು ನೈತಿಕತೆ ಇಲ್ಲ ಎಂದು ಪರೋಕ್ಷವಾಗಿ ಯತ್ನಾಳ ತಂಡವನ್ನು ತಿವಿದರು.
ಬಿಜೆಪಿ ಶಿಸ್ತಿನ ಪಕ್ಷ. ಇಲ್ಲಿ ಪ್ರತ್ಯೇಕವಾಗಿ ಪ್ರವಾಸ ಇಲ್ಲವೇ ಅಭಿಯಾನ ನಡೆಸಲು ಅವಕಾಶ ಇಲ್ಲ. ವಿಜಯೇಂದ್ರ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಲಾಗಿದೆ. ಬೆಳಗಾವಿ ಅಧಿವೇಶನದಲ್ಲೂ ಹೋರಾಟದ ಬಗ್ಗೆ ರೂಪುರೇಷಗಳನ್ನು ಸಿದ್ಧಪಡಿಸಲಾಗಿದೆ. ಅಧಿಕೃತವಾಗಿ ರಾಜ್ಯಾಧ್ಯಕ್ಷರು ಯಾವ ತೀರ್ಮಾನ ತೆಗೆದುಕೊಳ್ತಾರೆ ಅದಕ್ಕೆ ನಾವು ಬದ್ಧವಾಗಿರಬೇಕು ಎಂದರು.
ಶಾಸಕರ ಖರೀದಿಗೆ ಬಿಜೆಪಿ ಮೇಲೆ 50 ಕೋಟಿ ರೂ. ಆರೋಪ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ರಾಜ್ಯದಲ್ಲಿ ಸಿಎಂ ಆದಮೇಲೆ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ಅವರ ಮೇಲೆ ಮೇಲೆ ವಾಲ್ಮೀಕಿ ನಿಗಮ, ಮುಡಾ, ವಕ್ಫ್ ವಿವಾದ ಇದೆ. ಜತೆಗೆ ಅಲ್ಪ ಸಂಖ್ಯಾತರ ಗುತ್ತಿಗೆದಾರಿಗೆ ಶೇ.4 ಮೀಸಲಾತಿ ನೀಡುವ ವಿವಾದ ಇದೆ. ಯಾವಾಗ ಮುಡಾ ತನಿಖೆ ಗಂಭೀರವಾಗಲು ಪ್ರಾರಂಭವಾಯಿತೋ ಆಗ ಕೋವಿಡ್ ವಿಚಾರದಲ್ಲಿ ಯಡಿಯೂರಪ್ಪ ಮೇಲೆ ಎಸ್‌ಐಟಿ ರಚನೆ ಮಾಡಿರುವುದಕ್ಕೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.