ನ್ಯೂಸ್

ಅಧಿಕಾರಿ ಮಿತ್ರರ ನೇಮಕಕ್ಕೆ ನಿರ್ಧಾರ

ಶಿವಮೊಗ್ಗ: ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಪ್ರಾಥಮಿಕ ಹಂತದ ಕಾನೂನು ಅರಿವು ಮೂಡಿಸುವ ಜತೆಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಅರಿವು ಮೂಡಿಸುವ ಕಾರ್ಯನಿರ್ವಹಿಸಲು ಅಧಿಕಾರಿ ಮಿತ್ರರನ್ನು ನೇಮಿಸಿಕೊಳ್ಳಲು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ಧರಿಸಿದೆ. ಈ ಸಂಬಂಧ ನೇಮಕಾತಿ ಪ್ರಕ್ರಿಯೆ ನಡೆಸಲಿದೆ ಎಂದು ನ್ಯಾಯಾಧೀಶ ಶಶಿಧರ ಶೆಟ್ಟಿ ಹೇಳಿದರು.

ಆಯ್ಕೆ ಬಯಸಿ ಅರ್ಜಿ ಸಲ್ಲಿಸಲು ಇಚ್ಛಿಸುವವರು ಜನರ ನಡುವೆಯಿದ್ದು, ಗೌರವಧನದ ಆಧಾರದ ಮೇಲೆ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಸಾಮಾಜಿಕ ಪಿಡುಗುಗಳು, ಪೋಕ್ಸೋ, ಬಾಲ್ಯವಿವಾಹ ಮತ್ತಿತರ ಜನಜಾಗೃತಿ ವಿಚಾರಗಳ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿದ್ದು, ಕನ್ನಡ ಮತ್ತು ಆಂಗ್ಲಭಾಷೆ ಓದು, ಬರಹ ಬಲ್ಲವರಾಗಿರಬೇಕು. ನಿವೃತ್ತ ನೌಕರರು, ಸಾಮಾಜಿಕ ಕಾರ್ಯಕರ್ತರು, ಅಧ್ಯಾಪಕರು, ತುಳಿತಕ್ಕೊಳಗಾದವರ ಬಗ್ಗೆ ಕಳಕಳಿಯಿಂದ ಕಾರ್ಯನಿರ್ವಹಿಸಲು ಬಯಸುವವರು, ವೈದ್ಯರು, ನಿವೃತ್ತ ಸೈನಿಕರು ಅರ್ಜಿ ಸಲ್ಲಿಸಬಹುದು. ಪ್ರತಿ ಜಿಲ್ಲಾ ಕೇಂದ್ರಕ್ಕೆ 50ರಿಂದ 100 ಜನರಿಗೆ ಹಾಗೂ ತಾಲೂಕು ಮಟ್ಟದಲ್ಲಿ 25 ರಿಂದ 50 ಜನ ಅಧಿಕಾರಿ ಮಿತ್ರರನ್ನು ನೇಮಿಸಿಕೊಳ್ಳಲು ಉದ್ದೇಶಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾರ್ಯನಿರ್ವಹಿಸುವ ದಿನ ಒಂದಕ್ಕೆ 750 ರೂ. ಗೌರವಧನ ನೀಡಲಾಗುವುದು ಎಂದರು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಅರ್ಹ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಿ, ಕಾರ್ಯನಿರ್ವಹಿಸುವ ಅವಧಿಗೆ ಗುರುತಿನ ಚೀಟಿ ನೀಡಲಾಗುವುದು. ಆಯ್ಕೆ ಸಮಿತಿಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರು, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಅಧ್ಯಕ್ಷರು ಹಾಗೂ ಸದಸ್ಯರೊಬ್ಬರು ಇರಲಿದ್ದಾರೆ. ಆಯ್ಕೆ ನಂತರ ಲಿಖಿತ ಪರೀಕ್ಷೆ ನಡೆಸಲಾಗುವುದು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಅರ್ಜಿ ಪಡೆದು ಅ.30ರೊಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಮಾತನಾಡಿ, ಸೆ.13ರಂದು ಜಿಲ್ಲಾದ್ಯಂತ ನಡೆದ 3ನೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 14,550 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.

ಪ್ರಾಧಿಕಾರದ ಸದಸ್ಯ ಉಪಕಾರ್ಯದರ್ಶಿ ಶ್ರೀಧರ್, ಪಿಆರ್‌ಒ ಬಾಲಸುಬ್ರಹ್ಮಣ್ಯ ಸುದ್ದಿಗೋಷ್ಠಿಯಲ್ಲಿದ್ದರು.