ಅರಸೀಕೆರೆ : ನಗರದ ಹೊರವಲಯದ ಗೀಜಿಹಳ್ಳಿ ಬಳಿ ಶವಸಂಸ್ಕಾರಕ್ಕೆ ಮೀಸಲಿರುವ ಐದು ಎಕರೆ ಜಾಗವನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ ಎಂದು ವೀರಶೈವ ಲಿಂಗಾಯತ ರುದ್ರಭೂಮಿ ಸಮಿತಿ ಅಧ್ಯಕ್ಷ ಮುರುಗೇಂದ್ರಪ್ಪ ತಿಳಿಸಿದರು.
ನಗರದಲ್ಲಿ ವೀರಶೈವ ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ ಎಂಬುದನ್ನು ಮನಗಂಡು ಮಾಜಿ ಶಾಸಕ ದಿ.ಜಿ.ವಿ.ಸಿದ್ದಪ್ಪ ಅವರು ಐದು ಎಕರೆ ಜಾಗ ಮಂಜೂರು ಮಾಡಿಸಿದ್ದರು. ಕೆಲ ಕಾರಣದಿಂದ ಉದ್ದೇಶಿತ ಪ್ರದೇಶದ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಇದೀಗ ಸಮುದಾಯದ ಮುಖಂಡರು ಒಟ್ಟಾಗಿ ಕುಳಿತು ಚರ್ಚಿಸಿ ಹೊಸ ಸಮಿತಿ ಅಸ್ತಿತ್ವಕ್ಕೆ ತಂದಿದ್ದು ಚುನಾಯಿತ ಜನಪ್ರತಿನಿಧಿಗಳ ಸಹಕಾರ ಪಡೆದು ಎಲ್ಲ ರೀತಿಯ ಮೂಲಸೌಕರ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುರುಗೇಂದ್ರಪ್ಪ ಒಂದು ಲಕ್ಷ ರೂ. ನೆರವು ಘೋಷಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಾಗೂ ಸಮಿತಿಯ ಉಪಾಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ, ಮೃತರ ಅಂತ್ಯಕ್ರಿಯೆ ಸುಸೂತ್ರವಾಗಿ ನಡೆಯಬೇಕು ಎನ್ನುವ ಸಂಕಲ್ಪ ನಮ್ಮದಾಗಿದೆ. ಕುಡಿಯುವ ನೀರು, ನೆರಳು, ಚಿತಾಗಾರ, ಸಾಮಗ್ರಿ ಶೇಖರಣಾ ಕೊಠಡಿ ಸೇರಿದಂತೆ ಎಲ್ಲ ಬಗೆಯ ಅನುಕೂಲ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇವೆ ಎಂದು ಹೇಳಿದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್ ಮಾತನಾಡಿ, ರುದ್ರಭೂಮಿ ಅಭಿವೃದ್ಧಿ ನಮ್ಮ ಮೊದಲ ಆದ್ಯತೆಯಾಗಿದೆ. ಇದಲ್ಲದೇ ಹಸಿರು ವನ ನಿರ್ಮಾಣ, ಆರೋಗ್ಯ ತಪಾಸಣಾ ಶಿಬಿರ ಒಳಗೊಂಡಂತೆ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಮಿತಿ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಜ್ಞಾನೇಶ್ 50 ಸಾವಿರ ರೂ. ಕೊಡುವುದಾಗಿ ವಾಗ್ದಾನ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮುರುಂಡಿ ಶಿವಯ್ಯ, ವಿಜಯ್ ಕುಮಾರ್ , ಜ್ಞಾನೇಶ್,ವಿಶ್ವನಾಥ್ ಸೇರಿದಂತೆ ಟ್ರಸ್ಟ್ ನೂತನ ಪದಾಧಿಕಾರಿಗಳು ಗೊಷ್ಠಿಯಲ್ಲಿದ್ದರು.