ಬೆಂಗಳೂರು: ʼಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ʼ ಜಾರಿಗೊಂಡು 30 ವರ್ಷಗಳು ಸಂದಿವೆ. ಸಾರ್ಥಕ ಮೂರು ದಶಕಗಳ ಪ್ರಯಾಣವನ್ನು ಸಂಭ್ರಮಿಸುವ ದಿಸೆಯಲ್ಲಿ ನವೆಂಬರ್ 13 ಹಾಗೂ 14ರಂದು ರಾಷ್ಟ್ರೀಯ ಸ್ವರಾಜ್ ಸಮ್ಮೇಳನʼ ಆಯೋಜಿಸಲು ಉದ್ದೇಶಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಕಾಸಸೌಧದಲ್ಲಿ ಸಮ್ಮೇಳನ ಲಾಂಛನವನ್ನು ಬುಧವಾರ ಅನಾವರಣಗೊಳಿಸಿ ಮಾತನಾಡಿದ ಅವರು, ಈ ಸಂಬಂಧದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ, ಕರ್ನಾಟಕದಲ್ಲಿ 30 ವರ್ಷಗಳ ಕಾಲ ಪಂಚಾಯತ್ ವ್ಯವಸ್ಥೆ ನಡೆದು ಬಂದ ಹಾದಿ ಕುರಿತು ಅವಲೋಕನ, ಮುಂದಿನ 10 ವರ್ಷಗಳಿಗೆ ಅನ್ವಯವಾಗುವ ಕರ್ನಾಟಕ ಸ್ವರಾಜ್ಯ ಚಾರ್ಟರ್ ರೂಪಿಸುವ ಕುರಿತು ವಿಚಾರ ಸಂಕಿರಣ, ದುಂಡುಮೇಜಿನ ಪರಿಷತ್ತು, ಕಾರ್ಯಾಗಾರ, ಸಂವಾದ, ಚರ್ಚಾಗೋಷ್ಠಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಕಾರ್ಯಕ್ರಮಗಳಿಗೆ ರಾಜ್ಯ ಹಾಗೂ ರಾಷ್ಟ್ಟಮಟ್ಟದಲ್ಲಿ ಹೆಸರು ಗಳಿಸಿದವರೇ ಅಲ್ಲದೇ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಾಮಾಜಿಕ ತಜ್ಞರು, ಆರ್ಥಿಕ ತಜ್ಞರು, ಕಾನೂನು ತಜ್ಞರು, ಆಡಳಿತ ತಜ್ಞರು, ಸಂವಿಧಾನ ತಜ್ಞರು, ವಿಷಯ ತಜ್ಞರೇ ಮುಂತಾದ ಪರಿಣಿತರನ್ನು ಆಹ್ವಾನಿಸಲಾಗುವುದು.
ಈ ಗೋಷ್ಠಿಗಳ ನಂತರ ಹೊಮ್ಮುವ ವಿಚಾರಗಳನ್ನು ಆಧರಿಸಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಿಷಯಗಳಿಗೆ ಸಂಬಂಧಿಸಿದಂತೆ ಮುಂದಿನ 10 ವರ್ಷಗಳಿಗೆ ಕರ್ನಾಟಕ ಹಾಗೂ ಭಾರತದ ಪಂಚಾಯಿತಿ ವ್ಯವಸ್ಥೆಯಲ್ಲಿ ತರಬಹುದಾದ ಮತ್ತಷ್ಟು ಸುಧಾರಣೆಗಳನ್ನು ಸೂಚಿಸುವ ನೀಲಿನಕ್ಷೆಯನ್ನು ಒಳಗೊಂಡ ಕರ್ನಾಟಕ ಸ್ವರಾಜ್ಯ ಚಾರ್ಟರ್ ರೂಪಿಸಲಾಗುವುದು. ಈ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ಮಹತ್ವಯುತ ನಿರ್ಧಾರಗಳನ್ನು ʼಕರ್ನಾಟಕ ಪಂಚಾಯತ್ ರಾಜ್ ಘೋಷಣೆʼ ಎನ್ನಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಪ್ರಕಟಿಸಿದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ನೀತಿ ನಿರೂಪಕರು, ಶಿಕ್ಷಣತಜ್ಞರನ್ನು ಒಳಗೊಂಡಂತೆ ಶೈಕ್ಷಣಿಕ ಅಧಿವೇಶನಗಳು, ಗಾಂಧೀಜಿಯವರ ತತ್ವಗಳು ಮತ್ತು ಭಾರತೀಯ ಸಂವಿಧಾನದಲ್ಲಿ ಹುದುಗಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯಮೌಲ್ಯಗಳನ್ನು ಆಧರಿಸಿ ವಿಷಯಾಧಾರಿತ ಚರ್ಚೆಗಳು, ಪ್ರಸ್ತುತ ನಮ್ಮ ಸಮಾಜ ಎದುರಿಸುತ್ತಿರುವ ಸವಾಲುಗಳು ಮತ್ತು ಅವುಗಳಿಗೆ ಪರಿಹಾರ, ದುಂಡುಮೇಜಿನ ಚರ್ಚೆಗಳು ನಡೆಯಲಿವೆ ಎಂದು ವಿವರಿಸಿದರು.
ಸಮಾಜೋ-ಸಾಂಸ್ಕೃತಿಕ ವೇದಿಕೆಯಲ್ಲಿ ಭಾರತದ ವೈವಿಧ್ಯಮಯ ಹಾಗೂ ವೈಶಿಷ್ಟ್ಯಪೂರ್ಣ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ರಂಗಭೂಮಿ, ಸಾಂಪ್ರದಾಯಿಕ ಕಲೆ ಮತ್ತು ಚಲನಚಿತ್ರಗಳ ಪ್ರದರ್ಶನ, ಚರಕ ತರಗತಿಗಳು ಮತ್ತು ಧ್ಯಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು.
ಸಂವಿಧಾನದ 75 ವರ್ಷಗಳ ಅವಧಿಯಲ್ಲಿ ಕಂಡ ಪ್ರಗತಿ, ಅಭಿವೃದ್ಧಿ ಹಾಗೂ ಸವಾಲುಗಳ ಚಿತ್ರಣವನ್ನು ಪ್ರತಿಬಿಂಬಿಸುವ ಪೇಂಟಿಂಗ್ಸ್, ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಒಳಗೊಂಡ ವಸ್ತುಪ್ರದರ್ಶನ ಆಯೋಜಿಸಲಾಗುವುದು ಎಂದೂ ತಿಳಿಸಿದರು.
ಪೂರ್ವಭಾವಿಯಾಗಿ ಸಮ್ಮೇಳನ ಕುರಿತಂತೆ ಅರಿವು ಮೂಡಿಸುವ ಸಲುವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕಿರುಚಿತ್ರಗಳ ಆರೋಹಣ, ಜಿಲ್ಲಾ ಮಟ್ಟದಲ್ಲಿ ಉಪನ್ಯಾಸಗಳು ಹಾಗೂ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು.
ಮುಂದುವರೆದಂತೆ 2025ರ ಆದ್ಯಂತ ಭಾರತ ಸ್ವಾತಂತ್ರ್ಯ ಸಂಗ್ರಾಮವನ್ನು ಮುನ್ನಡೆಸಿದ ಹಾಗೂ ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ಮೌಲ್ಯಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು- ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಮತ್ತು ನೀತಿ ಕುರಿತ ಕೋರ್ಸ್, ಮಹಾತ್ಮಗಾಂಧಿ ಫೆಲೋಶಿಪ್, ಸಂವಿಧಾನ ಮ್ಯೂಸಿಯಂ ಸ್ಥಾಪನೆ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.