ಶಿವಮೊಗ್ಗ: ಜಿಲ್ಲೆಯಲ್ಲಿರುವ ಅಕೇಶಿಯಾವನ್ನು ಸಂಪೂರ್ಣವಾಗಿ ಬ್ಯಾನ್ ಮಾಡುವ ಕುರಿತಂತೆ ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಭೇಟಿಗೆ ನಿಯೋಗ ತೆರೆಳಲು ನಿರ್ಧರಿಸಲಾಯಿತು.
ನಗರದಲ್ಲಿ ಶನಿವಾರ ನಮ್ಮೂರಿಗೆ ಅಕೇಶಿಯ ಬೇಡ ಸಂಘಟನೆಯಿಂದ ಅಕೇಶಿಯ ನೆಡುತ್ತಿರುವ ವಿಚಾರವಾಗಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸಲು ಸಭೆ ನಡೆಸಿದ ಹೋರಾಟಗಾರರು, ಆಗಸ್ಟ್ ಮಾಸಾಂತ್ಯ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ನಿಯೋಗ ಹೋಗಲು ಹೋರಾಟಗಾರರು ಒಮ್ಮತದ ನಿರ್ಧಾರ ಕೈಗೊಂಡರು.
ಮೊದಲು ಜಿಲ್ಲೆಯಲ್ಲಿರುವ ಅಕೇಶಿಯಾವನ್ನು ತೆಗೆಯಬೇಕು ಮತ್ತು ಈಗಾಗಲೇ ಅಕೇಶಿಯಾ ಬೆಳೆಯುವುದಕ್ಕೆ ಭೂಮಿಯ ಲೀಜ್ ಅವಧಿಯನ್ನು 40 ವರ್ಷಕ್ಕೆ ವಿಸ್ತರಿಸುವುದನ್ನು ಹಿಂಪಡೆಯುವುದು ಮೊದಲ ಆದ್ಯತೆಯಾಗಿದೆ. ಮೊದಲು ಮನವಿ ಸಲ್ಲಿಸುವುದು. ಮನವಿಗೆ ಸ್ಪಂದಿಸಿದ್ದರೆ ಎರಡನೇ ಹಂತವಾಗಿ ಬೃಹತ್ ಪ್ರತಿಭಟನೆ ಮೂಲಕ ಅಕೇಶಿಯವನ್ನು ಕಿತ್ತುಹಾಕುವ ಕಾರ್ಯವನ್ನು ಕೈಗೊಳ್ಳುವುದು. ಮೂರನೇ ಹಂತವಾಗಿ ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟ ನಡೆಸುವ ಬಗ್ಗೆಯೂ ಚರ್ಚೆ ನಡೆಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಕೆ.ಪಿ.ಶ್ರೀಪಾಲ, ಪ್ರೊ. ರಾಜೇಂದ್ರ ಚೆನ್ನಿ, ಎಂ.ಗುರುಮೂರ್ತಿ, ಜಗದೀಶ್, ಫ್ರಾನ್ಸಿಸ್, ವಿಜಯ್, ಸುರೇಶ್ ಅರಸಾಳು, ಸಾಯಿಮನೆ ಸುದರ್ಶನ್, ದಾವಣಗೆರೆ ಜಿಪಂ ಮಾಜಿ ಸದಸ್ಯ ಮಹೇಶ್, ಸಾರ್ವಜನಿಕ ಸಿದ್ದೇಶ್ ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.