ಶಿವಮೊಗ್ಗ: ಅನುಭವವಿಲ್ಲದೆ ಜ್ಞಾನವಿಲ್ಲ, ಜ್ಞಾನವಿಲ್ಲದೆ ವಿಜ್ಞಾನವಿಲ್ಲ. ಜ್ಞಾನವು ಅನ್ವೇಷಣೆಗೆ ಪೂರಕವಾದುದು. ಪಠ್ಯಾಧಾರಿತ ಯೋಜನೆಗಳಿಗಿಂತ ನಾವೀನ್ಯತೆ ಆಧಾರಿತ ಯೋಜನೆಗಳು ದೇಶದ ಭವಿಷ್ಯವನ್ನು ನಿರ್ಧರಿಸಲಿವೆ ಎಂದು ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಸಂಶೋಧನಾ ವಿಭಾಗದ ಹಿರಿಯ ವಿಜ್ಞಾನಿ ಡಾ. ಪ್ರಶಾಂತ್ ಮಿಶ್ರಾ ಅಭಿಪ್ರಾಯಪಟ್ಟರು.
ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ(ಕೆಎಸ್‌ಸಿಎಸ್‌ಟಿ)ಯಿಂದ 48ನೇ ರಾಜ್ಯಮಟ್ಟದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿ ಮತ್ತು ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಅಧ್ಯಯನ ಮಾಡಬೇಕು. ತೊಡಕುಗಳನ್ನು ಸವಾಲಾಗಿ ಸ್ವೀಕರಿಸಬೇಕು. ನಾವೀನ್ಯತೆ ಸ್ಪರ್ಶ ನೀಡುವ ಮೂಲಕ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಬದುಕಿನಲ್ಲಿ ಹೊಸತನದ ಆಲೋಚನೆಗಳಿದ್ದರೆ ಮಾತ್ರ ಮುನ್ನಡೆ ಸಾಧ್ಯವಿದ್ದು, ಅನುಭವ ಆಧಾರಿತ ಕಲಿಕೆ ಹೊಸ ಜ್ಞಾನ ನೀಡಿದರೆ, ಜ್ಞಾನದ ತಳಹದಿ ಆವಿಷ್ಕಾರ ವಿಜ್ಞಾನವಾಗಿ ರೂಪುಗೊಳ್ಳುತ್ತದೆ ಎಂದರು.
ಕೆಎಸ್‌ಸಿಎಸ್‌ಟಿ ಕಾರ್ಯದರ್ಶಿ ಪ್ರೊ. ಅಶೋಕ ಎಂ. ರಾಯಚೂರು ಮಾತನಾಡಿ, ಇಂದಿನ ವಿಜ್ಞಾನ, ನಾಳೆಯ ತಂತ್ರಜ್ಞಾನ ಆಗಲಿದೆ. ಸಂಶೋಧನೆ ಮತ್ತು ನಾವೀನ್ಯತೆ ಎಂಬುದು ರಾತ್ರೋರಾತ್ರಿ ಒಡಮೂಡುವ ಸಂಗತಿಗಳಲ್ಲ. ಸಮೀಕ್ಷೆಯಿಂದ ಹಿಡಿದು ಪೇಟೆಂಟ್ ಪಡೆಯುವವರೆಗೂ ವಿಭಿನ್ನತೆಯ ಆಲೋಚನೆಗಳಿರಬೇಕು ಎಂದರು.
ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಸಂಯೋಜಕರಾದ ಡಾ. ಬಿ.ಎನ್.ರವಿಕುಮಾರ್, ಡಾ. ಎಸ್.ಜಿ.ಚೇತನ್, ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಚ್.ಬಿ.ಸುರೇಶ್ ಉಪಸ್ಥಿತರಿದ್ದರು.