ಕೋಲಾರ: ಕರ್ನಾಟಕ ವಿಧಾನ ಪರಿಷತ್‌ಗೆ ಕೋಲಾರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ದ್ವೈವಾರ್ಷಿಕ ಚುನಾವಣೆ ಡಿ.10ರಂದು ನಡೆಯಲಿದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 321 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಡಿಸಿ ಡಾ.ಆರ್.ಸೆಲ್ವಮಣಿ ಹೇಳಿದರು.
ಜಿಲ್ಲಾಡಳಿತ ಭವನದ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರವು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ತಲಾ 6 ತಾಲೂಕು ವ್ಯಾಪ್ತಿಯನ್ನು ಒಳಗೊಂಡಿದೆ ಎಂದರು.
ಚುನಾವಣಾ ವೇಳಾಪಟ್ಟಿ ಪ್ರಕಟಣೆಯಾದ ನ.9ರಿಂದಲೇ ಮಾದರಿ ನೀತಿ ಸಂಹಿತೆ ಜಾರಿ ಇದೆ. ರಾಜಕೀಯ ಪಕ್ಷಗಳಿಂದ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಲು ಪ್ರತಿ ತಾಲೂಕಿಗೆ ಎರಡು ತಂಡ ರಚಿಸಲಾಗಿದೆ. ತಾಲೂಕು ಕಚೇರಿ, ಚುನಾವಣಾ ಶಾಖೆಯಲ್ಲಿ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸಿ (ದೂ.ಸಂ. 243507) 24/7 ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು. ಎರಡೂ ಜಿಲ್ಲೆಯ ಕೇಂದ್ರದ ಅಧಿಕಾರಿಗಳನ್ನು ಮೈಕ್ರೋ ವೀಕ್ಷಕರನ್ನಾಗಿ ನೇಮಕ ಮಾಡಲಾಗುವುದು. ಮತದಾನ ಸಿಬ್ಬಂದಿಗೆ ಆಯಾ ತಾಲೂಕುಗಳಲ್ಲಿ ಎರಡು ಹಂತದಲ್ಲಿ ತರಬೇತಿ ನೀಡಲಾಗುವುದು ಎಂದರು.
ಮತಗಟ್ಟೆ: ಕೋಲಾರ ಜಿಲ್ಲೆಯಲ್ಲಿ 163 ಮತಗಟ್ಟೆ, ಚಿಕ್ಕಬಳ್ಳಾಪುರದಲ್ಲಿ 158 ಮತಗಟ್ಟೆಗಳನ್ನು ತೆರೆಯಲಾಗಿದೆ. ಪ್ರತಿ ತಾಲೂಕಿನ ಗ್ರಾಪಂ, ನಗರಸಭೆ, ಪುರಸಭೆ, ಪಪಂ ಕಚೇರಿಗಳನ್ನು ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಎಲ್ಲ ಮತಗಟ್ಟೆಗಳ ಪೈಕಿ ಹಿಂದಿನ ಮತದಾನದ ಸನ್ನಿವೇಶ ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ ಸೂಕ್ಷ್ಮ, ಅತಿ ಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆ ಗುರುತಿಸಿ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.
ಮತದಾರರು: ಕೋಲಾರದಲ್ಲಿ 2669 ಹಾಗೂ ಚಿಕ್ಕಬಳ್ಳಾಪುರದಲ್ಲಿ 2929 ಮತದಾರರಿದ್ದು, ಒಟ್ಟಾರೆ ಎರಡೂ ಜಿಲ್ಲೆಗಳ 5208 ಗ್ರಾಪಂ ಸದಸ್ಯರು, 372 ಸ್ಥಳೀಯ ಸಂಸ್ಥೆಗಳ ಸದಸ್ಯರು, ಲೋಕಸಭಾ ಸದಸ್ಯರು, 11 ವಿಧಾನಸಭಾ ಸದಸ್ಯರು, 5 ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 5598 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ ಎಂದರು.
ಮತದಾನ ಪ್ರಕ್ರಿಯೆ: ನ. 16ರಂದು ಅಧಿಸೂಚನೆ ಪ್ರಕಟವಾಗಲಿದ್ದು, ನಾಮಪತ್ರ ಸಲ್ಲಿಸಲು 23 ಕೊನೇ ದಿನ. ನಾಮಪತ್ರಗಳ ಪರಿಶೀಲನೆ 24ರಂದು ನಡೆಯಲಿದ್ದು, ಉಮೇದುವಾರಿಕೆ ವಾಪಸ್ ಪಡೆಯಲು 26 ಕೊನೇ ದಿನ. ಡಿ. 10ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಎರಡೂ ಜಿಲ್ಲೆಗಳಲ್ಲಿನ ಮತಪೆಟ್ಟಿಗೆಗಳನ್ನು ಜಿಲ್ಲಾ ಕೇಂದ್ರದ ಸ್ಟ್ರಾಂಗ್‌ರೂಂನಲ್ಲಿ ಇಡಲಾಗುವುದು. ಡಿ.14ರಂದು ಮತ ಎಣಿಕೆ ನಡೆಯಲಿದೆ. ಮತದಾನಕ್ಕೆ ಇವಿಎಂ ಬಳಸಲಾಗುತ್ತಿಲ್ಲ. ಪ್ರಾಶಸ್ತ್ಯ ಮತಗಳನ್ನು ಚಲಾಯಿಸಬೇಕಿರುವುದರಿಂದ ಮತಪೆಟ್ಟಿಗೆ ಬಳಸಲಾಗುವುದು ಎಂದರು.
ಜಿಪಂ ಸಿಇಒ ಉಕೇಶ್ ಕುಮಾರ್, ಚುನಾವಣಾ ತಹಸೀಲ್ದಾರ್ ನಾಗವೇಣಿ, ಚುನಾವಣಾ ಶಾಖೆ ಸಿಬ್ಬಂದಿ ಮಂಜುಳಾ ಭಾರ್ಗವಿ ಹಾಜರಿದ್ದರು.