ಬೆಂಗಳೂರು: ಕೇರಳದಲ್ಲಿ ಸುರಿದ ಧಾರಕಾರ ಮಳೆಗೆ ವಯನಾಡಿನಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ಇದೀಗ ಮೃತಪಟ್ಟವರ ಸಂಖ್ಯೆ 156ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಮಣ್ಣಿನಡಿ ಇನ್ನೂ ನೂರಾರು ಮಂದಿ ಸಿಲುಕಿದ್ದು, ಸುಳಿವು ಸಿಗದಂತೆ ಕಣ್ಮರೆಯಾಗಿದ್ದಾರೆ. ಒಂದೇ ಕುಟುಂಬದ ಹಲವರು ದುರಂತ ಸಾವು ಕಂಡಿದ್ದು, ಮೃತರ ದೇಹ ಹೊರತೆಗೆಯಲು ರಕ್ಷಣಾ ಪಡೆ ಹರಸಾಹಸ ಪಡುತ್ತಿದೆ.
ಭೂದುರಂತದಲ್ಲಿ ನಾಪತ್ತೆಯಾದವರ ಸಂಖ್ಯೆಯನ್ನು ಕಂಡುಹಿಡಿಯಲು ಇದೀಗ ಜಿಲ್ಲಾಧಿಕಾರಿಗಳು ಡೇಟಾವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಎಷ್ಟು ಜನರು ಮಣ್ಣಿನಡಿಯಲ್ಲಿ ಸಿಲುಕಿರಬಹುದು ಎಂಬುದನ್ನು ಸರಿಯಾಗಿ ತಿಳಿಯಲು ಜಿಲ್ಲಾಡಳಿತ ಅಧಿಕಾರಿಗಳು ಹಲವು ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ತಾತ್ಕಾಲಿಕ ಸೇತುವೆ ಬಳಸಿ ಇಲ್ಲಿಯವರೆಗೆ 1000ಕ್ಕಿಂತ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿರುವ ಭಾರತೀಯ ಸೇನೆ, ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.