ನ್ಯೂಸ್

ಎಲ್ಲರಿಂದಲೂ ಎಲ್ಲದರಿಂದಲೂ ಮುಕ್ತಿ ನೀಡುವ ಕ್ಷಣವೇ ಮರಣ!

ಒಮ್ಮೆ ಸಾವು ಬದುಕನ್ನು ಕೇಳಿತಂತೆ ‘ಓ ಬದುಕೇ ಅಂದೇಕೆ ಎಲ್ಲರಿಗೂ, ನೀನೆಂದರೆ ಪ್ರೀತಿ; ನಾನೆಂದರೆ ದ್ವೇಷ. ಎಲ್ಲರಿಗೂ ನೀನೇ ಬೇಕು, ನಾನು ಬೇಡವೇ ಬೇಡ. ಯಾಕೆ ಹೀಗೆ?’ ಬದುಕು ಮಾರ್ವಿುಕವಾದ ಉತ್ತರವನ್ನು ಹೀಗೆ ನೀಡಿತಂತೆ ‘‘ಏಕೆಂದರೆ, ನಾನೋ ಒಂದು ಸುಂದರ ಸುಳ್ಳು. ನೀನಾದರೋ ಒಂದು ಕಠೋರ ಸತ್ಯ’. ಈ ಮಾತಿನ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವ ಹಂಬಲ ನನಗುಂಟಾಯಿತು.

ತಮಗೆಲ್ಲಾ ತಿಳಿದಿರುವಂತೆ, ಗೌತಮ ಬುದ್ಧ ಓರ್ವ ವೃದ್ಧನನ್ನು, ಒಬ್ಬ ರೋಗಿಯನ್ನು ಹಾಗೂ ಒಂದು ಹೆಣವನ್ನು ನೋಡಿ ಜೀವನವನ್ನು ಅರ್ಥೈಸಿಕೊಂಡು ಭಗವಾನ್ ಬುದ್ಧನಾದ. ಆದರೆ ನನಗೆ ಓರ್ವ ವಿಚಾರವಾದಿ ಹೇಳಿದರು ‘ಜೀವನವನ್ನು ಅರ್ಥೈಸಿಕೊಳ್ಳಲು ಒಮ್ಮೆಯಾದರೂ ನೀನು ಈ ಮೂರು ಸ್ಥಳಗಳನ್ನು ಸಂದರ್ಶಿಸಲೇಬೇಕು’ ಎಂದು. ಅವುಗಳೆಂದರೆ

1. ನಾನಾ ರೀತಿಯ ರೋಗಗಳಿಂದ ನರಳುತ್ತಾ, ಸಹಿಸಲಾರದ ನೋವನ್ನು ಅನುಭವಿಸುತ್ತಾ ತಮ್ಮ ಅಂತ್ಯಕಾಲವನ್ನು ಎದುರು ನೋಡುತ್ತಿರುವ, ಬದುಕು ಸಾವುಗಳ ನಡುವೆ ಹೋರಾಡುತ್ತಿರುವ ರೋಗಿಗಳು ತುಂಬಿರುವ ಆಸ್ಪತ್ರೆಯನ್ನು.

2. ಕೆಟ್ಟ ಕ್ಷಣಮಾತ್ರದ ಕೋಪಾವೇಶದ ಭರದಲ್ಲಿ ಸ್ಥಿಮಿತವನ್ನು, ವಿವೇಚನೆಯನ್ನು ಕಳಕೊಂಡು, ದುಷ್ಕೃತ್ಯಗಳನ್ನು ಎಸಗಿ, ಜೈಲುವಾಸವನ್ನು ಅನುಭವಿಸುತ್ತಾ, ಪಶ್ಚಾತ್ತಾಪದ ಬೇಗುದಿಯಲ್ಲಿ ಬೇಯುತ್ತ ಪರಿತಪಿಸುತ್ತಿರುವ ಕೈದಿಗಳು ತುಂಬಿರುವ ಜೈಲನ್ನು.

3. ಊರಿನಾಚೆ ಇರುವ ತಮ್ಮ ಕೊನೆಯ ತಾಣವಾದ ಸ್ಮಶಾನವನ್ನು.

ಅಂತೆಯೇ ಒಂದು ದಿನ, ಧೈರ್ಯಮಾಡಿ ಒಬ್ಬನೇ, ಊರಿನಾಚೆ ಇರುವ ಸ್ಮಶಾನಕ್ಕೆ ಹೋದೆ. ಸಂಜೆಯ ವೇಳೆಯಾಗಿತ್ತು. ನಿಧನರಾಗಿದ್ದ ತಮ್ಮ ಕಡೆಯವರ ಅಂತ್ಯ ವಿಧಿಗಳನ್ನು ಆಗತಾನೇ, ಪೂರೈಸಿ, ಜನರು ಅವರವರ ಮನೆಗೆ ಹಿಂತಿರುಗಿದ್ದರು. ಹೆಣ ಸುಡುವವನು ಮಾತ್ರ ಅಲ್ಲೇ ಉಳಿದಿದ್ದ. ಕೆಲವು ಶವಗಳು ಸುಟ್ಟು ಭಸ್ಮವಾಗಿದ್ದವು. ಇನ್ನು ಕೆಲವು ಮೃತದೇಹಗಳು ಸುಟ್ಟು ಹೋಗುತ್ತಿದ್ದುವು. ಅರೆಬೆಂದ ಶವಗಳ ಮೇಲೆ ಇನ್ನಷ್ಟು ಕಟ್ಟಿಗೆಗಳನ್ನು ಹಾಕುತ್ತ ಅವು ಸಂಪೂರ್ಣವಾಗಿ ಸುಟ್ಟುಹೋಗಲು ಸುಡುವವನು ನೆರವಾಗುತ್ತಿದ್ದ. ಎಲ್ಲಾ ಹೆಣಗಳು ಸಂಪೂರ್ಣವಾಗಿ ಸುಟ್ಟುಹೋಗುವವರೆಗೆ ಕಾದು, ಸುಟ್ಟುಹೋದ ಹೆಣಗಳ ಬೂದಿಯನ್ನು ಶೇಖರಿಸಿ, ಮರುದಿನ ಸಂಬಂಧಪಟ್ಟವರಿಗೆ ನೀಡುವುದು ಅವನ ದಿನಚರಿಯಾಗಿತ್ತು. ಸುಡಬೇಕಾಗಿದ್ದ ಇನ್ನಷ್ಟು ಹೆಣಗಳನ್ನು ಸಾಲಾಗಿ ಮಲಗಿಸಲಾಗಿತ್ತು. ಒಂದು ತೂಗುದೀಪದ ಕೆಳಗೆ ಮುಂದಿನ ಹೆಣವನ್ನು ಸುಡಲು ಸಿದ್ಧನಾಗಿ ಕುಳಿತಿದ್ದ ಆ ಹೆಣ ಸುಡುವವನನ್ನು ನಾನು ಕೇಳಿದೆ:

‘ನಿನಗೆ ಈ ಹೆಣಗಳ ಮುಖವನ್ನು ನೋಡುವಾಗ ಭಯವಾಗುವುದಿಲ್ಲವೇ?’ ಉತ್ತರವಾಗಿ ಅವನು ಹೇಳಿದ: ‘ಎಲ್ಲಿಯ ಭಯ ಸ್ವಾಮೀ! ನಿಜ ಹೇಳಬೇಕೆಂದರೆ, ನನಗೆ ಈ ಹೆಣಗಳ ಮುಖವನ್ನಲ್ಲ; ಜೀವಂತವಿರುವ ಮನುಷ್ಯರ ಮುಖ ನೋಡುವಾಗ ಭಯವಾಗುತ್ತದೆ’ ‘ಯಾಕೆ?’ ಎಂದು ಮರು ಪ್ರಶ್ನಿಸಲು ಆತ ಹೇಳಿದ: ‘ಜೀವಂತವಾಗಿರುವ ಕೆಲ ಮನುಷ್ಯರ ಮುಖದ ಮೇಲೆ, ಒಂದು ತೃಪ್ತಿ, ಶಾಂತಿ, ನೆಮ್ಮದಿ ಎಂಬುದೇ ಇಲ್ಲ. ಒಬ್ಬೊಬ್ಬರ ಮುಖದಲ್ಲಿ ಒಂದೊಂದು ಭಾವನೆಗಳು. ಕೆಲವರ ಮುಖದಲ್ಲಿ ಅಶಾಂತಿ, ಅಸಹನೆ, ಅತೃಪ್ತಿಯ ಭಾವನೆಗಳು ಎದ್ದು ಕಂಡರೆ, ಇನ್ನು ಕೆಲವರ ಮುಖದಲ್ಲಿ, ಕೋಪ, ಕ್ರೋಧ, ದುರಾಸೆ, ಮದ, ಮತ್ಸರ ಇತ್ಯಾದಿ. ಒಟ್ಟಿನಲ್ಲಿ ಸುಖ ಸಂತೋಷಗಳನ್ನು ಹೊಂದಿರುವ ಮುಖಗಳೇ ಅಪರೂಪ. ಅದೇ ನೋಡಿ, ಈ ಹೆಣಗಳ ಮುಖದ ಮೇಲೆ ಯಾವ ಭಾವನೆಯೂ ಇಲ್ಲ. ಅದು ನಿರ್ಲಿಪ್ತ. ಹುಟ್ಟಿದಾಗ ಹೇಗೆ ಇತ್ತೋ ಈಗಲೂ ಹಾಗೆಯೇ ಇದೆ. ಈ ಹೆಣಗಳ ಮುಖದಲ್ಲಿ ಈಗ ಉಳಿದಿರುವುದು ಎಲ್ಲದರಿಂದಲೂ ಎಲ್ಲವರಿಂದಲೂ ಮುಕ್ತಿ ಹೊಂದಿದ ಒಂದು ಚಿರಶಾಂತಿ. ಆದುದರಿಂದಲೇ ಈ ಹೆಣಗಳ ಮುಖವನ್ನು ನೋಡುವಾಗ ನನಗೆ ಯಾವ ಭಯವೂ ಆಗುವುದಿಲ್ಲ.’

ಅವನ ಮಾತುಗಳು ಅರ್ಥಗರ್ಭಿತವಾಗಿದ್ದುವು. ಈ ಜಗತ್ತನ್ನೇ ಬಿಟ್ಟು ಹೋಗುವಾಗ ಬರುವ ಮನಸ್ಥಿತಿ, ಇಲ್ಲಿ ಇರುವಾಗ ಬರುವುದಿಲ್ಲ. ಏನೇನೋ ಆಸೆ ಆಕಾಂಕ್ಷೆಗಳಿಂದ, ದುಗುಡ- ದುಮ್ಮಾನಗಳಿಂದ, ಸಿಟ್ಟು ಸೆಡವುಗಳಿಂದ, ಅತೃಪ್ತಿ ಅಸಮಾಧಾನಗಳಿಂದ ಮುಖದ ಮೇಲಿನ ಮಂದಹಾಸವನ್ನೇ ಕಳೆದುಕೊಂಡಿರುತ್ತೇವೆ. ಕಾರಣ ಜೀವನ ಆರಂಭವಾದಾಗ ಒಂದು ಜೀವಕಣ. ಅಂತ್ಯವಾದಾಗ ಯಾರಿಗೂ ಬೇಡವಾದ ಒಂದು ಹೆಣ. ನಡುವೆ ಏನೇನೋ ಬೇಕೆನ್ನುವ ಗುಣ! ಜೀವನವೆನ್ನುವುದು ಮೊದಲು ‘ನಾನು’, ‘ನನ್ನದು’, ‘ನನ್ನಿಂದಲೇ’ ‘ನನಗಾಗಿಯೇ’ ಎಂಬ ಮಮಕಾರ ಮತ್ತು ಅಹಂಕಾರದಿಂದ ಆರಂಭವಾಗಿ, ‘‘ನನ್ನದೇನಿದೆ?’ ‘‘ನನ್ನದೇನಿಲ್ಲ!’ ಎಂಬ ಸತ್ಯದ ಅರಿವಿನೊಂದಿಗೆ ಮುಂದುವರಿದು ‘ದೇವಾ, ಎಲ್ಲವೂ ನಿನ್ನದೇ’ ಎಂಬ ಶರಣಾಗತ ಭಾವದಿಂದ ಕೊನೆಗೊಳ್ಳುತ್ತದೆ. ಈ ಭಾವವನ್ನು ಸತ್ತವರ ಮುಖದ ಮೇಲೆ ಕಾಣಬಹುದು. ಮತ್ತೇಕೆ ಈ ಹಟ ಈ ಹಾರಾಟ. ಈ ಹೋರಾಟ?

(ಪ್ರತಿಕ್ರಿಯಿಸಿ: drputhuraya@yahoo.co.in)