ನ್ಯೂಸ್

ಕಾನ್​ಸ್ಟೆಬಲ್ ಪರೀಕ್ಷೆಗೂ ನಡೆದಿತ್ತು ಡೀಲ್: 19ರಂದು ನಡೆಯಲಿದೆ ಎಕ್ಸಾಂ; ಕಿಂಗ್​ಪಿನ್​ಗೆ ದುಡ್ಡುಕೊಟ್ಟವರು ಕಂಗಾಲು

Ravikanth Kundapura

| ಬಾಬುರಾವ ಯಡ್ರಾಮಿ ಕಲಬುರಗಿ

ಬ್ಲೂಟೂತ್ ಕಿಂಗ್​ಪಿನ್ ಆರ್.ಡಿ.ಪಾಟೀಲ್ ನೆರವಿನಿಂದ ಪೊಲೀಸ್ ಕಾನ್​ಸ್ಟೆಬಲ್ ನೇಮಕ ಪರೀಕ್ಷೆಯಲ್ಲಿ ಅಕ್ರಮವೆಸಗಿ ಪಾಸಾಗಲು ಡೀಲ್ ಕುದುರಿಸಿಕೊಂಡಿದ್ದವರು ಈಗ ಮುಂದಿನ ದಾರಿ ಕಾಣದೆ ಕಂಗಾಲಾಗಿದ್ದಾರೆ. ಇನ್ನೊಂದೆಡೆ ಇತ್ತೀಚಿನ ಕೆಇಎ ಪರೀಕ್ಷೆಯಲ್ಲಿ ಮಾತುಕತೆಯಂತೆ ಒಪ್ಪಂದ ಮಾಡಿಕೊಂಡವರು ಪರೇಶಾನ್​ನಲ್ಲಿದ್ದಾರೆ.

ಗೃಹ ಇಲಾಖೆಯ ನಗರ ಮೀಸಲು ಪಡೆ (ಸಿಆರ್) ಮತ್ತು ಜಿಲ್ಲಾ ಮೀಸಲು ಪೊಲೀಸ್ (ಡಿಆರ್) ಇತರ ಪೇದೆಗಳ ನೇಮಕಕ್ಕೆ ನ.19 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪೊಲೀಸ್ ಆಗಬೇಕೆಂಬ ಕನಸು ಕಟ್ಟಿಕೊಂಡ ಕೆಲವರು ಕಿಂಗ್​ಪಿನ್ ಜತೆ ಕೈಜೋಡಿಸಿ ಪರೀಕ್ಷೆಯಲ್ಲಿ ಉತ್ತರ ಹೇಳುವಂತೆ ವ್ಯವಹಾರ ಕುದುರಿಸಿದ್ದರು ಎಂದು ವಿಶ್ವಾಸಾರ್ಹ ಮೂಲಗಳು ವಿಜಯವಾಣಿಗೆ ತಿಳಿಸಿವೆ.

ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಎಸ್​ಡಿಎ, ಎಫ್​ಡಿಎ ಇತರ ಹುದ್ದೆಗಳ ನೇಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಉತ್ತರ ಬರೆಯಲು ಯತ್ನಿಸಿದ ಕೆಲವರು ಅಫಜಲಪುರ, ಕಲಬುರಗಿ, ಯಾದಗಿರಿ ಕೇಂದ್ರಗಳಲ್ಲಿ ಸಿಕ್ಕಿಬೀಳುತ್ತಲೇ ಕಿಂಗ್​ಪಿನ್ ಆರ್.ಡಿ.ಪಾಟೀಲ್ ತಲೆಮರೆಸಿಕೊಂಡಿರುವುದು ಪೇದೆ ನೇಮಕ ಪರೀಕ್ಷೆ ಬರೆಯಲು ತಯಾರಿ ಮಾಡಿಕೊಂಡಿದ್ದ ‘ಡೀಲ್ ಗಿರಾಕಿಗಳು‘ ಮುಂದಿನ ಗತಿಯೇನು? ಹೇಗೆ ತಮ್ಮ ಸರ್ಕಾರಿ ನೌಕರಿ ಕನಸು ಸಾಕಾರಗೊಳಿಸಿಕೊಳ್ಳಬೇಕು ಎಂದು ದಿಕ್ಕುತೋಚದೆ ಅಕ್ಷರಶಃ ಕಂಗಾಲಾಗಿದ್ದಾರೆ. ಕಾನ್​ಸ್ಟೆಬಲ್ ನೇಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳನ್ನು ಪಾಸ್ ಮಾಡಿಸಲು ಹೇಳಿಕೊಳ್ಳುವಷ್ಟು ದೊಡ್ಡ ಮೊತ್ತಕ್ಕೆ ವ್ಯವಹಾರ ಕುದುರಿಸಿಕೊಂಡಿಲ್ಲ. ಬದಲಿಗೆ ನಾಲ್ಕೈದು ಲಕ್ಷ ರೂಪಾಯಿಯೊಳಗೆ ಮಾತುಕತೆ ಮುಗಿಸಿದ್ದರು ಎನ್ನುತ್ತವೆ ಅದೇ ಮೂಲಗಳು. ಕೆಲವರು ಒಂದಿಷ್ಟು ಹಣವನ್ನು ಮುಂಗಡವಾಗಿಯೂ ಕೊಟ್ಟಿದ್ದರು. ಭಾನುವಾರವೇ (ನ.5) ಕಾನ್​ಸ್ಟೆಬಲ್ ಪರೀಕ್ಷೆ ದಿನಾಂಕ ನಿಗದಿಯಾಗಿತ್ತು. ಆದರೆ ಅಂದೇ ಕೆಪಿಎಸ್​ಸಿ ಪರೀಕ್ಷೆಗಳಿದ್ದ ಕಾರಣಕ್ಕೆ 19ಕ್ಕೆ ಮುಂದೂಡಲಾಗಿದೆ. ಪರೀಕ್ಷೆ ಮುಂದೂಡಲು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅಭ್ಯರ್ಥಿಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದರು.

ಸಿಆರ್ ಮತ್ತು ಡಿಆರ್ ಪೇದೆ ನೇಮಕ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಉತ್ತರ ಹೇಳಲು ಕಿಂಗ್​ಪಿನ್ ಆರ್. ಡಿ.ಪಾಟೀಲ್ 60ಕ್ಕೂ ಹೆಚ್ಚಿನ ಅಭ್ಯರ್ಥಿಗಳ ಜತೆ ಡೀಲ್ ಮಾಡಿಕೊಂಡಿದ್ದ. ಈಗ ಅವರೆಲ್ಲರೂ ಪರೀಕ್ಷೆ ಹೇಗೆ ಬರೆಯಬೇಕು. ಮುಂದೇನು ಮಾಡೋಣ ಎಂಬ ಬಗ್ಗೆ ಚಿಂತಿಸುತ್ತಲೇ ಹಣವೂ ಹೋಗಿದೆ, ಉದ್ಯೋಗವೂ ಸಿಗುವ ಲಕ್ಷಣ ಕಾಣುತ್ತಿಲ್ಲ ಎಂದು ಕೈ ಕೈ ಹೊಸಕಿಕೊಳ್ಳುತ್ತಿದ್ದಾರೆ.

ಅಡ್ಡಗಟ್ಟಿದವರ ಯಾಮಾರಿಸಿ ಎಸ್ಕೇಪ್: ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅ.28ರಂದು ನಡೆಸಿದ್ದ ನೇಮಕ ಪರೀಕ್ಷೆ ವೇಳೆ ಅಫಜಲಪುರ, ಕಲಬುರಗಿ ಕೇಂದ್ರಗಳಲ್ಲಿ ಕೆಲವರು ಸಿಕ್ಕಿ ಬೀಳುತ್ತಲೇ ಕಿಂಗ್​ಪಿನ್ ತನ್ನ ಪ್ಲ್ಯಾನ್ ಫೇಲಾಯಿತಲ್ಲ ಎಂದು ಘಾಸಿಗೊಂಡಿದ್ದಾನೆ. ಪೊಲೀಸರಿಗೆ ಸಿಕ್ಕಿ ಬಿದ್ದವರು ತನ್ನ ಹೆಸರು ಬಾಯ್ಬಿಟ್ಟಿದ್ದಾರೆ ಎಂಬುದನ್ನು ಅರಿಯುತ್ತಲೇ ಕಲಬುರಗಿಯಲ್ಲಿದ್ದ ಎನ್ನಲಾದ ಆರ್.ಡಿ. ಪಾಟೀಲ್ ತಪ್ಪಿಸಿಕೊಳ್ಳಲು ಹೊರಟಿದ್ದಾನೆ. ಆತ ಹುಮನಾಬಾದ್ ರಿಂಗ್​ರೋಡ್​ನಲ್ಲಿ ಕಾರಿನಲ್ಲಿ ಹೋಗುತ್ತಿದ್ದಾನೆ ಎಂಬುದು ಗೊತ್ತಾಗಿ ಅಭ್ಯರ್ಥಿಗಳ ಸಂಬಂಧಿಗಳು ಅಡ್ಡಗಟ್ಟಿ ಜಗಳಕ್ಕೆ ಬಿದ್ದಿದ್ದಾರೆ. ಮೊದಲ ಪರೀಕ್ಷೆಯಲ್ಲೇ ಸಿಕ್ಕು ಬಿದ್ದು ಆಪರೇಷನ್ ಫೇಲ್ ಆಗಿದೆ. ಹೀಗಾಗಿ ಎರಡನೇ ಪತ್ರಿಕೆ ಬರೆಯುವುದು ಕಷ್ಟಕರ. ಹೀಗಾಗಿ ನಾವು ಕೊಟ್ಟ ಮುಂಗಡ ಹಣ ವಾಪಸ್ ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಕೆಲವರು ಆತನ ಶರ್ಟ್ ಹಿಡಿದು ಎಳೆದಾಡಿದ್ದಾರೆ. ಕೆಲವರು ಹಿಗ್ಗಾ ಮುಗ್ಗಾ ಥಳಿಸಿ ಸಿಟ್ಟು ತೀರಿಸಿಕೊಂಡಿದ್ದಾರೆ ಎನ್ನಲಾಗಿದೆ. ಹಣ ತರಲು ಹೇಳಿದ್ದೇನೆ, ಕೊಡುತ್ತೇನೆ ಇರಿ ಎಂದು ಹೇಳಿ ಎಲ್ಲರನ್ನು ರಮಿಸಿ ಪರಾರಿಯಾಗಿದ್ದಾನೆ. ಅಂದಿನಿಂದ ಕಿಂಗ್​ಪಿನ್ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿಲ್ಲ.

ಕೆಇಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಕೆಲವರನ್ನು ಮರಳಿ ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಕೆಲವೊಂದು ಮಾಹಿತಿ ಸಿಕ್ಕಿವೆ. ಅದನ್ನಾಧರಿಸಿ ಕಿಂಗ್​ಪಿನ್ ಬಂಧನಕ್ಕೆ ಜಾಲ ಬೀಸಲಾಗಿದೆ. | ಚೇತನ್ ಆರ್., ಅಡ್ಡೂರು ಶ್ರೀನಿವಾಸುಲು, ಕಲಬುರಗಿ ಪೊಲೀಸ್ ಅಧಿಕಾರಿಗಳು

ವಾಟ್ಸ್​ಆ್ಯಪ್ ಜಾಡು ಪತ್ತೆಗೆ ಜಾಲ: ಇನ್ನೊಂದೆಡೆ ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಪೊಲೀಸರಿಗೆ ಸಿಕ್ಕು ಬಿದ್ದಿರುವ ಅಭ್ಯರ್ಥಿಗಳು ಮತ್ತವರ ಸಂಬಂಧಿಕರ ಮೊಬೈಲ್​ಗೆ ಸರ್ಕಾರ್ ಎಂಬ ಹೆಸರು ಸೇವ್ ಆಗಿರುವ ನಂಬರ್​ನಿಂದ ಕರೆ ಮತ್ತು ಸಂದೇಶಗಳು ಬಂದಿದ್ದವು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹೀಗಾಗಿ ಸರ್ಕಾರ್ ಯಾರು ಎಂಬ ಪ್ರಶ್ನೆಯೊಂದಿಗೆ ಪೊಲೀಸರು ಬೆನ್ನು ಹತ್ತಿದ್ದಾರೆ. ಈ ವ್ಯಕ್ತಿ ಅಫಜಲಪುರ ತಾಲೂಕಿ ನವರು ಎಂದು ಹೇಳಲಾಗುತ್ತಿದೆ. ಇನ್ನೊಂದು ಮೂಲದ ಪ್ರಕಾರ ಕಿಂಗ್​ಪಿನ್ ಹೆಸರು ಹಾಗೆಯೇ ಸೇವ್ ಮಾಡಲಾಗಿತ್ತು ಎನ್ನಲಾಗಿದೆ.