ನ್ಯೂಸ್

ಎಸ್‌ಸಿ ಸಮೀಕ್ಷೆ ವರದಿಗೆ ಗಡುವು: ಒತ್ತಾಯ | Delay causes recruitment

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ) ಸಮಗ್ರ ಸಮೀಕ್ಷಾ ವರದಿ ಸಲ್ಲಿಸಲು ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಆಯೋಗಕ್ಕೆ ಜು.10, ಮೀಸಲು ವರ್ಗೀಕರಣ ಆದೇಶ ಹೊರಡಿಸಲು ಸರ್ಕಾರಕ್ಕೆ ಜು.25ರ ಗಡುವು ವಿಧಿಸಬೇಕೆಂದು ಜಾಗೃತಿ ಸಭೆಯಲ್ಲಿ ಬುಧವಾರ ಒತ್ತಾಯಿಸಲಾಯಿತು.

ಬೆಂಗಳೂರಿನ ಗಾಂಧಿ ಭವನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಸಮಕ್ಷಮ ಎಸ್‌ಸಿ ಸಮೀಕ್ಷೆ ಜಾಗೃತಿ ಸಭೆ ನಡೆಯಿತು. ಈ ವೇಳೆ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ ಬೆಂಗಳೂರಿನಲ್ಲಿ ಸಮೀಕ್ಷೆ ನಿಧಾನ ಗತಿಯಲ್ಲಿರುವ ಕಾರಣ ಪದೇ ಪದೆ ಅವಧಿ ವಿಸ್ತರಿಸಲಾಗಿದೆ.

ವರದಿ ಸಲ್ಲಿಕೆ, ಮೀಸಲು ವರ್ಗೀಕರಣ ತನಕ ಸರ್ಕಾರದ ಎಲ್ಲ ನೇಮಕಗಳನ್ನು ನಿಲ್ಲಿಸಲಾಗಿದೆ. ಇದು, ಸರ್ಕಾರಿ ಉದ್ಯೋಗಾಕಾಂಕ್ಷಿ ನಿರುದ್ಯೋಗಿಗಳಿಗೂ ಸಮಸ್ಯೆಯಾಗಿದೆ. ಜೂ.30ಕ್ಕೆ ಸಮೀಕ್ಷೆ ಮುಗಿಸಿ ಜು.25ರೊಳಗೆ ವರದಿ ಸಲ್ಲಿಕೆ, ಅನುಷ್ಠಾನಕ್ಕೆ ಬಂದರೆ ಎಸ್‌ಸಿ ಸೇರಿ ಎಲ್ಲರಿಗೂ ಅನುಕೂಲವೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಹಿತಿ ನೀಡಿ ಸಹಕರಿಸಲಿ

ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ ಬೆಂಗಳೂರು ನಗರದ 120 ಕಾಲೊನಿಗಳಲ್ಲಿ ಎಲ್ಲ ಮನೆಗಳ ಸಮೀಕ್ಷೆಯನ್ನು ಬೆಳಗ್ಗೆ 6 ರಿಂದ 10, ಸಂಜೆ 5 ರಿಂದ ರಾತ್ರಿ 9ರವರೆಗೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಎಸ್‌ಸಿ ಸಮುದಾಯಗಳ ಜನರು ಗಣತಿದಾರರಿಗೆ ಸಕಾಲಕ್ಕೆ ಸೂಕ್ತ ಮಾಹಿತಿ ಸಮೀಕ್ಷೆ ವೇಗವಾಗಲು ಸಹಕರಿಸಬೇಕಾಗಿದೆ. ಈಗಾಗಲೇ ಶೇ.90ರಷ್ಟು ಸಮೀಕ್ಷೆ ಕಾರ್ಯ ಪ್ರಗತಿ ಸಾಧಿಸಿದ್ದು, ಬೆಂಗಳೂರು ಕೂಡ ನಿರೀಕ್ಷಿತ ಪ್ರಗತಿ ಹೊಂದಲು ಸಮುದಾಯದ ಮುಖಂಡರು ಶ್ರಮಿಸಬೇಕು ಎಂದು ಸಚಿವ ಮುನಿಯಪ್ಪ ಕೋರಿದರು.

ಸಭೆಯಲ್ಲಿ ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ, ಎಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ, ಮುಖಂಡರಾದ ಕೇಶವಮೂರ್ತಿ, ದೊಡ್ಡೇರಿ ವೆಂಕಟೇಶ, ದಾಸನೂರು ಕೂಸಣ್ಣ, ಕೋಗಿಲು ವೆಂಕಟೇಶ್ ಇನ್ನಿತರರು ಇದ್ದರು.