ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರಪ್ರದೇಶದಲ್ಲಿ ನಡೆದ ಗಲಭೆ, ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿ ಧ್ವಂಸ ಮಾಡಿರುವವರು ತಮಗೆ ನೀಡಲಾಗಿರುವ ನೋಟಿಸ್ಗೆ ವಾರದೊಳಗೆ ಉತ್ತರಿಸಬೇಕು ಎಂದು ಯೋಗಿ ಆದಿತ್ಯನಾಥ ಸರ್ಕಾರ ಗಡುವು ನೀಡಿದೆ.
ಆಸ್ತಿಹಾನಿ ಸಂಬಂಧ ಯಾರ್ಯಾರಿಗೆ ಸರ್ಕಾರದಿಂದ ನೋಟಿಸ್ ನೀಡಲಾಗಿದೆಯೋ ಅವರೆಲ್ಲರೂ ಇನ್ನು 7 ದಿನಗಳೊಳಗೆ ಪ್ರತಿಭಟನೆಯಲ್ಲಿ ತಮ್ಮ ಪಾತ್ರವೇನು ಅಥವಾ ತಾವು ಹಾನಿ ಮಾಡಿಲ್ಲ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಬೇಕು. ಇಲ್ಲದೇ ಹೋದರೆ ಸರ್ಕಾರದ ಕ್ರಮದ ಪ್ರಕಾರ ಆಸ್ತಿ ಹಾನಿಗೆ ದಂಡ ಕಟ್ಟಬೇಕು. ಒಂದು ವೇಳೆ ದಂಡ ಕಟ್ಟದೆ ಹೋದರೆ ಅಂಥವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ನಷ್ಟ ಭರ್ತಿ ಮಾಡಿಕೊಳ್ಳಲಾಗುತ್ತದೆ. ಈವರೆಗೆ ಲಖನೌದಲ್ಲಿ 150 ಜನರಿಗೆ ನೋಟಿಸ್ ನೀಡಲಾಗಿದ್ದು, ಉತ್ತರ ಪ್ರದೇಶದಾದ್ಯಂತ ಸುಮಾರು 300ಕ್ಕೂ ಹೆಚ್ಚು ಜನರಿಗೆ ನೋಟಿಸ್ ಕಳುಹಿಸಲಾಗಿದೆ.
ಪೌರತ್ವ ಕಾಯ್ದೆ ವಿರೋಧಿಸಿ ಕಳೆದ ಡಿಸೆಂಬರ್ನಲ್ಲಿ ಉತ್ತರಪ್ರದೇಶದಲ್ಲಿ ತೀವ್ರ ಪ್ರತಿಭಟನೆ, ಹಿಂಸಾಚಾರ ನಡೆದಿತ್ತು. ಅಪಾರ ಪ್ರಮಾಣದ ಸಾರ್ವನಿಕ ಆಸ್ತಿಗೆ ಹಾನಿಯಾಗಿತ್ತು. ಆಸ್ತಿ ಹಾನಿ ಮಾಡಿದ ದುಷ್ಕರ್ವಿುಗಳನ್ನು ಸಿಸಿಟಿವಿ ವಿಡಿಯೋಗಳ ಮೂಲಕ ಪತ್ತೆಮಾಡಿ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಸರ್ಕಾರದ ಮಾಹಿತಿ ಪ್ರಕಾರ ಲಖನೌದಲ್ಲಿ ಹಿಂಸಾಚಾರದ ವೇಳೆ 2.54 ಕೋಟಿ ರೂ. ಮೌಲ್ಯದ ಆಸ್ತಿ ಧ್ವಂಸವಾಗಿದ್ದು, 152 ಜನರಿಗೆ ನೋಟಿಸ್ ನೀಡಲಾಗಿದೆ. ಸಂಭಾಲಾದಲ್ಲಿ 15 ಲಕ್ಷ ರೂ. ಹಾನಿಯಾಗಿದ್ದು, 26 ನೋಟಿಸ್ ನೀಡಲಾಗಿದೆ. ರಾಮಪುರದಲ್ಲಿ 14.86 ಲಕ್ಷ ರೂ. ಹಾನಿಗೆ 28 ನೋಟಿಸ್, ಬಿಜ್ನುರ್ನಲ್ಲಿ 19.70 ಲಕ್ಷ ರೂ. ಹಾನಿಗೆ 43 ನೋಟಿಸ್, ಕಾನ್ಪುರ್ನಲ್ಲಿ 10.97 ಲಕ್ಷ ರೂ. ಹಾನಿಗೆ 15 ನೋಟಿಸ್ ಹಾಗೂ ಮುಜಾಫರ್ನಗರದಲ್ಲಿ 56.7 ಲಕ್ಷ ರೂ. ಆಸ್ತಿ ಹಾನಿ ಸಂಬಂಧ 40 ಜನರಿಗೆ ನೋಟಿಸ್ ನೀಡಲಾಗಿದೆ.
ಸಿಎಎ ವಿರೋಧಿ ಪ್ರತಿಭಟನೆ, ಹಿಂಸಾಚಾರ ಪ್ರಕರಣ ಸಂಬಂಧ ಫಿರೋಜಾಬಾದ್ ಪೊಲೀಸರು ಸುಮಾರು 200 ಜನಕ್ಕೆ ಕೋರ್ಟ್ಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಇದರಲ್ಲಿ 6 ವರ್ಷದ ಹಿಂದೆಯೇ ಮೃತಪಟ್ಟಿರುವ ಬನ್ನೆ ಖಾನ್ ಎಂಬುವವರಿಗೂ ನೋಟಿಸ್ ನೀಡಲಾಗಿದೆ.
ಮಂಗಳೂರು ಗೋಲಿಬಾರ್ ಮೃತರ ಹೆಸರಿನಲ್ಲಿ 2 ಕೋಟಿ ರೂ. ಸಂಗ್ರಹ
ಮಂಗಳೂರು: ಪೌರತ್ವ ಕಾಯ್ದೆ ಪ್ರತಿಭಟನೆ ವೇಳೆ ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು, ಸಮಾಜದಿಂದ 2 ಕೋಟಿ ರೂಪಾಯಿಗೂ ಅಧಿಕ ಮೊತ್ತ ಸಂಗ್ರಹಣೆಯಾಗಿದೆ ಎಂಬ ಮಾಹಿತಿ ಪೊಲೀಸ್ ಇಲಾಖೆಗೆ ಲಭಿಸಿದೆ. ಮೊದಲು ಪರಿಹಾರ ಪ್ರಕಟಿಸಿದ್ದ ಸರ್ಕಾರ, ಬಳಿಕ ಅದನ್ನು ತಡೆ ಹಿಡಿದಿತ್ತು. ಇದಕ್ಕೆ ಹಲವು ಮುಸ್ಲಿಂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಸರ್ಕಾರದ ನೆರವನ್ನು ಪಡೆಯುವುದೇ ಬೇಡ, ಸಮಾಜದ ಇತರರು ನೀಡುವ ನೆರವನ್ನು ಮಾತ್ರ ಪಡೆಯೋಣ ಎಂದು ಕೆಲವರು ಹೇಳಿದ್ದರು. ಆ ಬಳಿಕ ಸಮುದಾಯದ ವಿವಿಧ ಸಂಘಟನೆಗಳು 2 ಕೋಟಿ ರೂ.ನಷ್ಟು ಮೊತ್ತ ಸಂಗ್ರಹಿಸಿದ್ದಾರೆ. ಆದರೆ ಈ ಕುರಿತು ಮಾಹಿತಿ ನೀಡಲು ಸಂಘಟನೆಗಳು ನಿರಾಕರಿಸಿವೆ. ಲಭ್ಯ ಮಾಹಿತಿ ಪ್ರಕಾರ ಈ ಮೊತ್ತದಲ್ಲಿ ಮೃತ ನೌಶೀನ್ ಕಂದುಕ ಹಾಗೂ ಜಲೀಲ್ ಕುದ್ರೋಳಿ ಅವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ನೀಡುವ ಸಾಧ್ಯತೆ ಇದ್ದು, ಗೋಲಿಬಾರ್ನಲ್ಲಿ ಗಾಯಗೊಂಡಿರುವ 8 ಮಂದಿಗೆ ಉಳಿದ ಮೊತ್ತವನ್ನು ಹಂಚಲಿದ್ದಾರೆ. ಈಗಾಗಲೇ ಪಶ್ಚಿಮ ಬಂಗಾಳ ಸರ್ಕಾರ ಮೃತರ ಕುಟುಂಬಕ್ಕೆ ತಲಾ 5 ಲಕ್ಷ, ಜೆಡಿಎಸ್ ಪರವಾಗಿ ತಲಾ 5 ಲಕ್ಷ ಹಾಗೂ ಕಾಂಗ್ರೆಸ್ ವತಿಯಿಂದ ತಲಾ 7.5 ಲಕ್ಷ ರೂ ವಿತರಿಸಲಾಗಿದೆ.
ಸಿಎಎ ಬೆಂಬಲಿಸಿ ಕಾಂಗ್ರೆಸ್ಗೆ ರಾಜೀನಾಮೆ
ಪೌರತ್ವ ಕಾಯ್ದೆ ಹಾಗೂ ಎನ್ಆರ್ಸಿ ಬೆಂಬಲಿಸಿ ಗೋವಾದ ನಾಲ್ವರು ಕಾಂಗ್ರೆಸ್ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಣಜಿ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಪ್ರಸಾದ್ ಅಮೋನ್ಕರ್, ಉತ್ತರ ಗೋವಾ ಅಲ್ಪಸಂಖ್ಯಾತರ ಸಮಿತಿ ಮುಖಂಡ ಜಾವೇದ್ ಶೇಖ್, ಬ್ಲಾಕ್ ಸಮಿತಿ ಕಾರ್ಯದರ್ಶಿ ದಿನೇಶ್ ಕುಬಾಲ್ ಹಾಗೂ ಕಾಂಗ್ರೆಸ್ ಯುವ ಘಟಕದ ಮಾಜಿ ಮುಖಂಡ ಶೀವರಾಜ್ ತರ್ಕಾರ್ ಅವರು ಕಾಂಗ್ರೆಸ್ ನಡೆಯನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ.
ನಿರ್ಣಯ ಅಸಿಂಧು
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅವಿಶ್ವಾಸ ಗೊತ್ತುವಳಿ ಅಂಗೀಕರಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಗೆ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಕಿಡಿಕಾರಿದ್ದಾರೆ. ಕೇರಳ ವಿಧಾನಸಭೆ ಅಂಗೀಕರಿಸಿರುವ ನಿರ್ಣಯಕ್ಕೆ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಸಿಂಧುತ್ವವಿಲ್ಲ. ಪೌರತ್ವವು ಪ್ರತ್ಯೇಕವಾಗಿ ಕೇಂದ್ರದ ವಿಷಯವಾಗಿದೆ. ಆದ್ದರಿಂದ ಅಂಗೀಕರಿಸಿರುವ ನಿರ್ಣಯ ಕಾನೂನಿಗೆ ಸಂಬಂಧಪಡುವುದಿಲ್ಲ ಎಂದು ಆರೀಫ್ ಖಾನ್ ಹೇಳಿದ್ದಾರೆ. ಸರ್ಕಾರದ ವ್ಯಾಪ್ತಿಗೆ ಮೀರಿದ ವಿಷಯಗಳ ಬಗ್ಗೆ ಅಮೂಲ್ಯ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯಯಿಸಬಾರದೆಂದು ನಾನು ಈಗಾಗಲೇ ಅಭಿಪ್ರಾಯ ಹೇಳಿದ್ದೇನೆ ಎಂದು ಖಾನ್ ಹೇಳಿದ್ದಾರೆ.
ಪಿಎಫ್ಐ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪಶ್ಚಿಮ ಬಂಗಾಳ
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ಸಿ ವಿರುದ್ಧ ಪ್ರತಿಭಟನೆ ನಡೆಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಗೆ ಪಶ್ಚಿಮ ಬಂಗಾಳ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪಶ್ಚಿಮ ಬಂಗಾಳದ ಮುಶಿದಾಬಾದ್ನಲ್ಲಿ ಜ.5ರಂದು ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ಪಿಎಫ್ಐ ಸಂಘಟನೆ ಪ್ರತಿಭಟನೆಗೆ ಮುಂದಾಗಿತ್ತು. ಆದರೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಪ್ರತಿಭಟನಾ ರ್ಯಾಲಿಗೆ ಅನುಮತಿ ನಿರಾಕರಿಸಿದ್ದಾರೆ. ಆದರೆ ಈಗಾಗಲೇ ಪಿಎಫ್ಐ ಕಡೆಯಿಂದ ರ್ಯಾಲಿಯಲ್ಲಿ ಪಾಲ್ಗೊಳ್ಳಿ ಎಂದು ಕರಪತ್ರಗಳನ್ನು ಹೊರಡಿಸಲಾಗಿದೆ. ಅದರಲ್ಲಿ ಟಿಎಂಸಿ ಪಕ್ಷದ ಸಂಸದ ಅಬು ತಹಿರ್ ಖಾನ್ರ ಹೆಸರನ್ನೂ ಉಲ್ಲೇಖಿಸಲಾಗಿದೆ.