ನ್ಯೂಸ್

ರೈಲ್ವೆ ಯೋಜನೆಗಳಿಗೆ ಭೂಸ್ವಾಧೀನಕ್ಕೆ ಗಡುವು: ಸಚಿವ ಎಂ.ಬಿ.ಪಾಟೀಲ | Warned to officers

ಬೆಂಗಳೂರು: ರಾಜ್ಯದಲ್ಲಿ ನಿರ್ಮಾಣದ ಹಂತದಲ್ಲಿರುವ ವಿವಿಧ ರೈಲ್ವೆ ಯೋಜನೆಗಳ ಕಾಮಗಾರಿಗೆ ವೇಗ ನೀಡಲು, ಅಗತ್ಯ ಜಮೀನು ಸ್ವಾಧೀನ ಪ್ರಕ್ರಿಯೆ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕೈಗಾರಿಕೆ, ಮೂಲ ಸವಲತ್ತು ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಾಕೀತು ಮಾಡಿದರು.

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸಂಬಂಧಿಸಿದ ಇಲಾಖೆಗಳು ಹಾಗೂ ನೈಋತ್ಯ ರೈಲ್ವೆ ಉನ್ನತಾಧಿಕಾರಿಗಳ ಜಂಟಿ ಸಭೆಯಲ್ಲಿ ರಾಜ್ಯದ ಎಲ್ಲ ರೈಲ್ವೆ ಯೋಜನೆಗಳ ಪ್ರಗತಿ ಬುಧವಾರ ಪರಿಶೀಲಿಸಿದರು.

ವಿವಿಧ ಕಾರಣಗಳಿಂದ ಭೂಸ್ವಾಧೀನ ನಿರೀಕ್ಷಿತ ವೇಗದಲ್ಲಿಲ್ಲ. ಸಮಸ್ಯೆಗಳಿದ್ದರೆ ಆಯಾ ಸಚಿವರು, ಶಾಸಕರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಲು ಅವಕಾಶವಿದೆ. ಕಾನೂನು ಮತ್ತು ತಾಂತ್ರಿಕ ತೊಡಕು ನೆಪದಲ್ಲಿ ಕಾಲಹರಣ ಮಾಡಬಾರದು ಎಂದು ಗರಂ ಆಗಿ ಹೇಳಿದರು.

ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ಮಾರ್ಗಕ್ಕೆ ಮಂಜೂರಾತಿ ಸಿಕ್ಕಿದೆ. ಮಮ್ಮಿಗಟ್ಟಿ ಬಳಿ ಮಾರ್ಗ ಬದಲಾವಣೆಗೆ ಒತ್ತಡದಿಂದ ಭೂಸ್ವಾಧೀನ ವಿಳಂಬವಾಗುತ್ತಿದೆ ಎಂದು ಗಮನಿಸಿದ ಸಚಿವ ಎಂ.ಬಿ.ಪಾಟೀಲ ಸದ್ಯದಲ್ಲೇ ಸ್ಥಳೀಯರೊಂದಿಗೆ ಸಭೆ ನಡೆಸುವೆ ಎಂದರು. ಇದೇ ವೇಳೆ ಸಚಿವ ಸಂತೋಷ ಲಾಡ್‌ರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಅಡಚಣೆ ನಿವಾರಿಸಲು ಸಲಹೆ ನೀಡಿದರು.

ಜಿಲ್ಲಾಧಿಕಾರಿಗೆ ಸೂಚನೆ

ಬಾಗಲಕೋಟೆ-ಕುಡಚಿ ಯೋಜನೆಯಡಿ ಖಜ್ಜಿದೋಣಿ-ಲೋಕಾಪುರ ನಡುವೆ ಜಮೀನು ಕಳೆದುಕೊಂಡಿರುವ ರೈತರು ಹೆಚ್ಚಿನ ಪರಿಹಾರಕ್ಕೆ ಪಟ್ಟು ಹಿಡಿದು, ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದಾಗ ಈ ಸಂಬಂಧ ಜಿಲ್ಲಾಧಿಕಾರಿಗೆ ದೂರವಾಣಿಯಲ್ಲಿ ಮಾತನಾಡಿ, ಸಮಸ್ಯೆ ತ್ವರಿತವಾಗಿ ಬಗೆಹರಿಸಲು ಸೂಚಿಸಿದರು.

ಈ ಮಾರ್ಗಕ್ಕೆ ಯಾದವಾಡ ಸಮೀಪ ಸ್ವಾಧೀನವಾದ ಏಳು ಎಕರೆ ಜಮೀನು ಒಂದು ವರ್ಷದಿಂದ ರೈಲ್ವೆ ಇಲಾಖೆಗೆ ಹಸ್ತಾಂತರವಾಗಿಲ್ಲ. ಶೀಘ್ರವೇ ಹಸ್ತಾಂತರಿಸಬೇಕು ಎಂದು ಚಿಕ್ಕೋಡಿ ಸಹಾಯಕ ಆಯುಕ್ತರಿಗೆ ನಿರ್ದೇಶಿಸಿದರು.

ಗದಗ-ಕುಡಚಿ ಮಾರ್ಗಕ್ಕೆ ಬೇಕಾದ 148 ಜಮೀನು ಮೂರು ತಿಂಗಳಲ್ಲಿ ಸ್ವಾಧೀನವಾಗಲಿದೆ. ಜತೆಗೆ ಇನ್ನೂ ಅಗತ್ಯವಿರುವ 100 ಎಕರೆ ಜಮೀನಿಗೆ ಬೇಕಾದ ಪರಿಹಾರ ನೀಡಲಾಗುವುದು. ಕೆಲ ರೈತರು ಕೋರ್ಟಿಗೆ ಮೊರೆ ಹೋಗಿರುವುದರಿಂದ ಅಧಿಕಾರಿಗಳು ಬಗೆಹರಿಸಬೇಕು. ಕುಷ್ಟಗಿ-ಜಿಮಲಾಪುರ ಮಾರ್ಗಕ್ಕೆ 47 ಎಕರೆ ಜಮೀನು ಬೇಗ ಲಭ್ಯವಾಗಲಿದೆ. ಈ ಭಾಗದಲ್ಲಿ ಲಿಂಗನಬಂಡ-ಕುಷ್ಟಗಿ ಮಧ್ಯೆ ರೈಲು ಓಡಾಟಕ್ಕೆ ಕ್ರಮವಹಿಸಬೇಕು ಎಂದು ಎಂ.ಬಿ.ಪಾಟೀಲ ಸೂಚಿಸಿದರು.

ಹಣಕಾಸು ಇಲಾಖೆಗೆ ಬೇಡಿಕೆ

ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗಕ್ಕೆ ಚಿತ್ರದುರ್ಗ ಜಿಲ್ಲೆಯಲ್ಲಿ 37 ಎಕರೆ, ತುಮಕೂರು ಜಿಲ್ಲೆಯಲ್ಲಿ 58.3 ಎಕರೆ ಭೂಸ್ವಾಧೀನ ಬಾಕಿಯಿದೆ. 48 ಕೋಟಿ ರೂ.ಗಳ ಬೇಡಿಕೆ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 3-4 ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಸುವಂತೆ ಸಚಿವರು ಗಡುವು ವಿಧಿಸಿದರು.

ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ಮಾರ್ಗದ ಮೊದಲ ಹಂತಕ್ಕೆ ಅನುಮೋದನೆ ಸಿಕ್ಕಿದ್ದು, ಇನ್ನೊಂದು ತಿಂಗಳಲ್ಲಿ ಒಪ್ಪಿಗೆ ಸಿಗಲಿದೆ. ರೈಲ್ವೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಜಂಟಿಯಾಗಿ ಭೂಸ್ವಾಧೀನ ಜವಾಬ್ದಾರಿ ನಿರ್ವಹಿಸಬೇಕು ಎಂದು ಎಂ.ಬಿ.ಪಾಟೀಲ ಹೇಳಿದರು.

ಭೂಸ್ವಾಧೀನಕ್ಕೆ ಇರುವ ತಾಂತ್ರಿಕ ತೊಡಕುಗಳ ನಿವಾರಣೆ ಸಲುವಾಗಿ ಕರೆದಿರುವ ಮಹತ್ತ್ವದ ಸಭೆಗಳಿಗೆ ಕೆಲವು ಹಿರಿಯ ಅಧಿಕಾರಿಗಳು ಕೋರ್ಟ್ ಕಲಾಪ ಇತ್ಯಾದಿ ನೆಪ ಹೇಳಿಕೊಂಡು, ಕಿರಿಯ ಅಧಿಕಾರಿಗಳನ್ನು ಕಳಿಸುತ್ತಿರುವುದು ಸರಿಯಲ್ಲವೆಂದು ಅಧಿಕಾರಿಗಳಿಗೆ ಚಾಟಿ ಬೀಸಿದರು.

ಹಿಂದಿನ ಸಭೆಗಳಲ್ಲೇ ಈ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಮುಂದಿನ ಬಾರಿಯಿಂದ ಸಂಬಂಧಿಸಿದ ನಿರ್ದಿಷ್ಟ ಅಧಿಕಾರಿಗಳೇ ಖುದ್ದಾಗಿ ಬರಬೇಕು. ಇಲ್ಲದೆ ಹೋದರೆ, ಅಮಾನತು ಮಾಡಲು ಶಿಫಾರಸು ಮಾಡಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದರು.