ಬೆಂಗಳೂರು: ಮುಂಬರುವ ನಗರ-ಪಟ್ಟಣ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಪಕ್ಷದ ಸಂಘಟನೆ ಬಲಪಡಿಸಿ, ಕಾರ್ಯಕರ್ತರನ್ನು ಸಜ್ಜುಗೊಳಿಸಲೆಂದು ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಿ, ಮೇ ಮೊದಲ ವಾರದ ಗಡುವು ವಿಧಿಸಿದೆ.
ಬಿಜೆಪಿ ಜತೆಗಿನ ಮೈತ್ರಿ ಬೇರೆ, ಸಂಘಟನೆಗೆ ಶಕ್ತಿ ತುಂಬುವುದು ಬೇರೆಯಾಗಿದೆ ಎಂದು ಮುಖಂಡರು ಮತ್ತು ಕಾರ್ಯಕರ್ತರಿಗೆ ತಿಳಿಸಿ, ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಪಕ್ಷದ ರಾಜ್ಯ ನಾಯಕರು ಮುಂದಾಗಿದ್ದಾರೆ.
ಸದಸ್ಯತ್ವ ನೋಂದಣಿ ಪ್ರಕ್ರಿಯೆ ಸುಸೂತ್ರವಾಗಿ ನಿರ್ವಹಣೆ, ಮೇಲ್ವಿಚಾರಣೆಗಾಗಿ ನಿಖಿಲ್ ಕುಮಾರ ಸ್ವಾಮಿ ಒಳಗೊಂಡು ರಾಜ್ಯ ಕೋರ್ ಕಮಿಟಿ ಸದಸ್ಯರ ಸಂಚಾಲನಾ ಸಮಿತಿ ರಚನೆಯಾಗಿದೆ.
ಪಕ್ಷಕ್ಕೆ ಯುವಜನರನ್ನು ಹೆಚ್ಚೆಚ್ಚು ಆಕರ್ಷಿಸಿ ಸದಸ್ಯತ್ವ ನೋಂದಣಿಗೆ ಪ್ರೇರಣ ನೀಡಲು ನಾಲ್ಕು ಕಂದಾಯ ವಿಭಾಗಗಳಲ್ಲಿ ಯುವ ಸಮಾವೇಶ ನಡೆಸುತ್ತಿದೆ. ಜಿಲ್ಲಾ, ತಾಲೂಕು ಪಂಚಾಯಿತಿ, ಪಾಲಿಕೆ ಚುನಾವಣೆಗಳಲ್ಲಿ ಯುವಜನರನ್ನು ಕಣಕ್ಕಿಳಿಸಲು ಒತ್ತು.
ಮೊದಲ ಸಮಾವೇಶವು ದೇವನಹಳ್ಳಿಯಲ್ಲಿ ನಡೆದಿದೆ. ಕಲ್ಯಾಣ ಕರ್ನಾಟಕ ವಿಭಾಗದ ಸಮಾವೇಶ ರಾಯಚೂರಿನಲ್ಲಿ ಏಪ್ರಿಲ್ ಎರಡನೇ ವಾರದಲ್ಲಿ ನಡೆಯಲಿದೆ. ನಂತರ ಹುಬ್ಬಳ್ಳಿ, ಕೊನೆಯದಾಗಿ ಮಂಡ್ಯದಲ್ಲಿ ಯುವ ಸಮಾವೇಶ ಆಯೋಜನೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮೇ ಮೊದಲ ವಾರದೊಳಗೆ ಸದಸ್ಯತ್ವ ನೋಂದಣಿ, ತಾಲೂಕು ಮತ್ತು ಜಿಲ್ಲಾ ಸಮಿತಿಗಳ ಪುನಾರಚನೆ ಪ್ರಕ್ರಿಯೆ ಪೂರ್ಣ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 10 ಸಾವಿರ ಸದಸ್ಯತ್ವದ ಗುರಿ, ಬೂತ್‌ಮಟ್ಟದಲ್ಲಿ 10 ಜನ ಸಮಿತಿ ರಚನೆ, ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ತಲಾ ಇಬ್ಬರು ವೀಕ್ಷಕರಿಗೆ ಹೊಣೆ
ತಾಲೂಕು ಮತ್ತು ಜಿಲ್ಲಾ ಸಮಿತಿಗಳ ಪುನಾರಚನೆ ಪ್ರಕ್ರಿಯೆ ನಿರ್ವಹಿಸಲು ಜಿಲ್ಲಾ ಚುನಾವಣಾಧಿಕಾರಿಗಳ ನೇಮಕ. ಪದಾಧಿಕಾರಿಗಳ ಆಯ್ಕೆಗೆ ಮಾನದಂಡಗಳನ್ನು ನಿಗದಿಪಡಿಸಿದ ಸಂಚಾಲನಾ ಸಮಿತಿ.