ನ್ಯೂಸ್

ಮಡಿಕೇರಿ ಕೋವಿಡ್​ ಆಸ್ಪತ್ರೆಯಲ್ಲಿ ಎಡವಟ್ಟು ! ಮೃತ ಮಹಿಳೆ ಮಾಂಗಲ್ಯ ಸರ ಕಾಣೆ !

ಕೊಡಗು : ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಎಡವಟ್ಟಿನ ಮೇಲೆ ಎಡವಟ್ಟು ನಡೀತಾ ಇದೆ. ಕರೊನಾದಿಂದ ಮೃತಪಡುತ್ತಿರುವ ರೋಗಿಗಳ ಬೆಲೆ ಬಾಳುವ ವಸ್ತುಗಳು ಕಣ್ಮರೆಯಾಗುವುದರೊಂದಿಗೆ ವೈದ್ಯರು ಹಣ ಪೀಕುತ್ತಿದ್ದಾರೆಂಬ ಆರೋಪ ಕೂಡ ಬಂದಿದೆ.

ನಿನ್ನೆ ಮಡಿಕೇರಿ ಕೋವಿಡ್​ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ತಾಯಿಯ ಮೊಬೈಲ್​​ ಕಳುವಾಗಿದೆ, ಹುಡುಕಿಕೊಡಿ ಎಂದು ಓರ್ವ ಬಾಲಕಿ ಮನವಿ ಮಾಡಿದ್ದಳು. ಇಂದು ಅದೇ ಆಸ್ಪತ್ರೆಯಲ್ಲಿ ಮೃತರಾದ ತಾಯಿಯ ಮಾಂಗಲ್ಯ ಸರಕ್ಕಾಗಿ ಪುತ್ರ ಕಣ್ಣೀರು ಹಾಕುತ್ತಿದ್ದಾನೆ.

ಮೇ 20 ರಂದು ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ನಿವಾಸಿಯಾಗಿದ್ದ ಕಮಲ(52) ಮಡಿಕೇರಿ ಮೆಡಿಕಲ್ ಕಾಲೇಜು ಕೋವಿಡ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರ ಕತ್ತಿನಲ್ಲಿದ್ದ 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಮಾಯವಾಗಿದೆ ಎಂದು ಆಕೆಯ ಮಗ ಮೊಣ್ಣಪ್ಪ ಮೆಡಿಕಲ್ ಕಾಲೇಜಿನ ಡೀನ್​​ಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲ. ಆಸ್ಪತ್ರೆಯ ಭ್ರಷ್ಟ ವೈದ್ಯರೊಬ್ಬರು ಅವರಿಂದ ಚಿಕಿತ್ಸೆಯ ಹೆಸರಲ್ಲಿ 20 ಸಾವಿರ ಹಣ ಪೀಕಿದ್ದರು ಎನ್ನಲಾಗಿದೆ. ಇದೀಗ ಹಣವೂ ಇಲ್ಲ. ಅಮ್ಮನ ಮಾಂಗಲ್ಯ ಸರವೂ ಇಲ್ಲ ಎಂದು ಮೊಣ್ಣಪ್ಪ ದೂರಿನಲ್ಲಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಯಿಸಿರುವ ಮೆಡಿಕಲ್ ಕಾಲೇಜಿನ ಡೀನ್​, ಯಾರೂ ಚಿನ್ನಾಭರಣ ಹಾಕಿ ಆಸ್ಪತ್ರೆಗೆ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ ಮಾಂಗಲ್ಯ ಸರ ಬಿಚ್ಚಿಸಿ ಕಳುಹಿಸುವುದು ಹೇಗೆ ಎಂದು ಮೃತ ಕಮಲ ಅವರ ಪುತ್ರ ಮೊಣ್ಣಪ್ಪ ಪ್ರಶ್ನೆ ಮಾಡಿದ್ದಾರೆ.