ಹೊಸನಗರ: ಸಂಗೀತದಿಂದ ನೆಮ್ಮದಿ ಮತ್ತು ಆರೋಗ್ಯ ಲಭಿಸುತ್ತದೆ. ವಿಶೇಷವಾಗಿ ಶಾಸೀಯ ಸಂಗೀತವನ್ನು ಹಾಡುವುದರಿಂದ ಅಥವಾ ಕೇಳುವ ಅಭ್ಯಾಸ ಮಾಡಿಕೊಂಡರೆ ಒತ್ತಡದಿಂದ ದೂರವಾಗಬಹುದು ಎಂದು ಸಾಗರದ ಸಂಗೀತ ಕಲಾವಿದ ಅಶೋಕ್‌ಕುಮಾರ್ ಹೇಳಿದರು.
ಕಾರಣಗಿರಿ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಪುರಂದರ ದಾಸ ಮತ್ತು ತ್ಯಾಗರಾಜರ ಆರಾಧನೆ ಪ್ರಯುಕ್ತ ಆಯೋಜಿಸಿದ್ದ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮಾತನಾಡಿ, ತ್ಯಾಗರಾಜರು ಮತ್ತು ಪುರಂದರ ದಾಸರ ಕೃತಿಗಳನ್ನು ಎಲ್ಲ ಭಾಷೆಯ ಸಂಗೀತಗಾರರೂ ಹಾಡುತ್ತಾರೆ. ಇದರಿಂದ ಭಾಷಾ ಸಾಮರಸ್ಯ ಕಾಪಾಡುವಲ್ಲಿ ಸಂಗೀತದ ಪಾತ್ರ ಹಿರಿದು ಎಂದರು.
ಗ್ರಾಮಭಾರತಿ ಟ್ರಸ್ಟ್ ಗೌರವಾಧ್ಯಕ್ಷ ಎನ್.ಡಿ.ನಾಗೇಂದ್ರ ರಾವ್, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಕೆ.ಎಸ್.ನಳಿನ್‌ಚಂದ್ರ, ಗ್ರಾಮ ವಿಕಾಸದ ಜಿಲ್ಲಾ ಸಂಯೋಜಕ ಕೆ.ಪಿ.ಕೃಷ್ಣಮೂರ್ತಿ, ಸಂಗೀತ ಶಿಕ್ಷಕಿ ಗಾಯತ್ರಿ ನಾಗರಾಜ್, ಗ್ರಾಪಂ ಸದಸ್ಯ ಗುರುಮೂರ್ತಿ ಇತರರಿದ್ದರು.
ಶಾರದಾ, ಗಾನಸುಧಾ, ರಾಗಲಹರಿ, ಸರಸ್ವತಿ, ಅಮೃತಾನಂದಮಯಿ ಸಂಗೀತ ಶಾಲೆ ಗಾಯಕರಿಂದ ಗಾಯನ ಹಾಗೂ ಎಲ್ಲ ಕಲಾವಿದರಿಂದ ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಗೋಷ್ಠಿ ನಡೆಯಿತು. ಸಂಗೀತ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಗೀತ ಶಿಕ್ಷಕಿ ಮಾಧುರಿ ದೇವಾನಂದ್‌ರನ್ನು ಸನ್ಮಾನಿಸಲಾಯಿತು.