ಮಾಗಡಿ : ಸಮಾಜದ ಏಳಿಗೆಗಾಗಿ ದೇಶದ ಉದ್ದಗಲಕ್ಕೂ ಮಠಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಿವೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಪ್ರಶಂಸೆ ವ್ಯಕ್ತಪಡಿಸಿದರು.
ತಾಲೂಕಿನ ಸೋಲೂರು ಹೋಬಳಿ ಪಾಲನಹಳ್ಳಿ ಮಠದಲ್ಲಿ ವಿಶೇಷ ಜಾತ್ರಾ ಮಹೋತ್ಸವ ಮತ್ತು ಶನೇಶ್ವರಸ್ವಾಮಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಏಳಿಗೆಗಾಗಿ, ಅವಕಾಶ ವಂಚಿತ ಮಕ್ಕಳಿಗೆ ಶಿಕ್ಷಣ ನೀಡುವ ಸಮಾಜದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ, ಶ್ರದ್ಧಾ-ಭಕ್ತಿಯ ಕೇಂದ್ರವಾಗಿರುವ ಪಾಲನಹಳ್ಳಿ ಮಠದಿಂದ ಆರಂಭಿಸಲು ಉದ್ದೇಶಿಸಿರುವ ಶಿಕ್ಷಣ ಸಂಸ್ಥೆ ಪ್ರಾರಂಭಕ್ಕೆ ನಾವುಗಳು ಸದಾ ಜತೆಯಲ್ಲಿರುತ್ತವೆ ಎಂದರು.
ಪಾಲನಹಳ್ಳಿ ಮಠದ ಧರ್ಮಾಧಿಕಾರಿ ಸಿದ್ದರಾಜು ಸ್ವಾಮಿ ಮಾತನಾಡಿ, ಮೌನದ ಹಿಂದೆ ಬಂಗಾರದ ಶಕ್ತಿ ಅಡಗಿರುತ್ತದೆ ಆದ್ದರಿಂದಲೇ ಮಾತು ಬೆಳ್ಳಿ ಮೌನ ಬಂಗಾರ ಎನುತ್ತಾರೆ. ವಿಶ್ವದಲ್ಲಿ ವಿಗ್ರಹರಾಧನೆ ಮಾಡುವ ಮೊದಲು ಪ್ರಕೃತಿಯ ಆರಾಧನೆ ಮಾಡಲಾಗುತ್ತಿತ್ತು ಆದ್ದರಿಂದ ಅನನ್ಯವಾದ ಚೇತನ್ಯವಿರುವ ಪ್ರಕೃತಿಯ ವಿರುದ್ಧ ನಾವುಗಳು ನಡೆಯದೆ ವಿಶ್ವದಲ್ಲಿ ಪ್ರತಿಯೊಬ್ಬರು ಪ್ರೀತಿ-ವಿಶ್ವಾಸದಿಂದ ಬಾಳಬೇಕು ಎಂದು ತಿಳಿಸಿದರು.
ಕೇಂದ್ರ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ ಮಾತನಾಡಿ, ಪಾಲನಹಳ್ಳಿ ಮಠಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು, ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗ ಮತ್ತು ದಲಿತ ವರ್ಗಗಳ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಮನುಷ್ಯನಿಗೆ ಶಾಂತಿ-ನೆಮ್ಮದಿ ಬೇಕಾಗಿದ್ದು ಇತ್ತಿಚೀನ ದಿನದಲ್ಲಿ ಆಸೆ ಬಹಳವಾಗುತ್ತಿದೆ, ಗ್ರಾ.ಪಂ ಚುನಾವಣೆಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಾ ರಾಜಕಾರಣ ಸೇವೆ ಎಂಬುದನ್ನು ಮರೆತು ಹಣ ಸಂಪಾದನೆ ಮಾಡುವ ವೃತ್ತಿ ಎಂದು ತಿಳಿದುಕೊಂಡಿದ್ದಾರೆ. ನಾವು ಮಾಡುವ ಕೆಲಸದಲ್ಲಿ ಬದ್ಧತೆ, ನಿಸ್ವಾರ್ಥ ಸೇವೆ ಇರಬೇಕು ಎಂದು ಹೇಳಿದರು. ನೆಲಮಂಗಲ ಶಾಸಕ ಡಾ.ಕೆ ಶ್ರೀನಿವಾಸ್‌ಮೂರ್ತಿ ಮಾತನಾಡಿ ಮಠದ ಅಭಿವೃದ್ಧಿ ಕೆಲಸಗಳಿಗೆ ನಾನು ಅಳಿಲು ಸೇವೆ ಮಾಡಲು ಬದ್ಧನಾಗಿರುತ್ತೇನೆ, ನಮ್ಮಲ್ಲಿ ಧ್ಯೇಯ-ಶಕ್ತಿ ಇದ್ದರೆ ನಾವು ಮಾಡುವ ಕೆಲಸಗಳು ಪರಿಪೂರ್ಣವಾಗುತ್ತವೆ ಎಂದು ತಿಳಿಸಿದರು.
ಪುರಸಭಾಧ್ಯಕ್ಷೆ ಭಾಗ್ಯಮ್ಮ ನಾರಾಯಣ್, ಬಿಎಂಆರ್‌ಡಿಎ ಅಧ್ಯಕ್ಷ ಡಾ.ರಂಗಧಾಮಯ್ಯ, ಬಿಎಂಟಿಸಿ ನಿರ್ದೇಶಕ ಕೆ.ಪಿ.ಬೃಂಗೇಶ್, ಕೆ.ಪಿ.ಆನಂದ್, ಸಮಾಜದ ಮುಖಂಡ ಎಲ್.ಎನ್ ಸ್ವಾಮಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್ ಅನಿಲ್‌ಕುಮಾರ್, ಲಕ್ಷ್ಮೀನಾರಾಯಣ್, ನಿವೃತ್ತ ಕುಲಪತಿ ಪ್ರೋ.ಒ ಅನಂತರಾಮಯ್ಯ, ಶಾರದಮ್ಮ, ಡಾ.ಡಿ.ಒ. ಗಂಗಾಧರಸ್ವಾಮಿ, ಡಾ.ಜಗದೀಶ್, ರಾಘವೇಂದ್ರ, ಅಗೋರೇಶ್ವರ ಭಗವಾನ್, ಡಾ.ಮಧುಸೂದನಾನಂದಸ್ವಾಮಿ ಇದ್ದರು.