ನ್ಯೂಸ್

ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ; ದೇವೇಗೌಡರ ಕುಟುಂಬವನ್ನು ಖರೀದಿಸುವ ಶಕ್ತಿ ಅವರಿಗಿಲ್ಲ ಎಂದು ಟಾಂಗ್

ಬೆಂಗಳೂರು:

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೇವೇಗೌಡರ ಕುಟುಂಬವನ್ನು ಖರೀದಿಸುವ ಶಕ್ತಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಯಶವಂತಪುರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಹಿಸುವುದಕ್ಕೆ ಮುನ್ನ ಮಾಧ್ಯಮಗಳ ಜತೆ ಮಾತನಾಡಿ, ದೇವೇಗೌಡರನ್ನು ಬಿಟ್ಟು ಯಾರನ್ನು ಬೇಕಾದರೂ ಖರೀದಿ ಮಾಡುವ ಶಕ್ತಿ ಅವರಿಗಿದೆ ಎಂದರು.

ಅವರು ಯಾರಿಗೂ ಹೆದರಲ್ಲ. ಅವರು ಯಾರನ್ನು ಬೇಕಾದರೂ ಖರೀದಿ ಮಾಡುತ್ತಾರೆ. ಬಿಜೆಪಿಯ ದೆಹಲಿಯ ನಾಯಕರನ್ನೇ ಖರೀದಿ ಮಾಡಿದ್ದರೂ ಅಚ್ಚರಿ ಇಲ್ಲ ಎಂದರು.

ಬಿಚ್ಚೊದು ಬಿಚ್ಚೊದು ಎಂದು ಅವರು ಪದೇಪದೆ ಹೇಳುತ್ತಿದ್ದಾರೆ. ಹೊರಗೆ ಬರಬೇಕಾದದ್ದು ಬಂದೇ ಬರುತ್ತದೆ. ಈವರೆಗೂ ಮಾಡಿಕೊಂಡಿದ್ದು ಸಾಕು. ಇನ್ನಾದರೂ ಲೂಟಿ ಹೊಡೆಯೊದು ನಿಲ್ಲಿಸಿ, ಅಣ್ಣ ಅಂತಿರಲ್ಲ. ಅಣ್ಣನಾಗಿ ಹೇಳುತ್ತೇನೆ. ಇನ್ನಾದರೂ ಈ ಲೂಟಿ ನಿಲ್ಲಿಸಿ. ಈ ಕಿವಿಮಾತು ಕೇಳಿದರೆ ನಿಮ್ಮನ್ನು ತಮ್ಮ ಎಂದು ಒಪ್ಪಿಕೊಳ್ಳುತ್ತೇನೆ ಎಂದರು.

ನೈಸ್ ಅಕ್ರಮಗಳ ದಾಖಲೆ ಶೀಘ್ರವೇ ಬಿಡುಗಡೆ ಮಾಡುತ್ತೇನೆ. ಇದರಲ್ಲಿ ಸಂಶಯ ಇಲ್ಲ. ಈ ಯೋಜನೆ ಹೆಸರಲ್ಲಿ ಏನೇನು ಆಗಿದೆ? ಎಷ್ಟೆಲ್ಲ ಅಕ್ರಮ ನಡೆದಿದೆ? ಯಾರೆಲ್ಲಾ ಫಲಾನುಭವಿಗಳು ಇದ್ದಾರೆ? ಎಲ್ಲವನ್ನೂ ಜನರ ಮುಂದೆ ಇಡುತ್ತೇನೆ. ಕೆಲವರ ಹಣೆಬರಹ ಆಚೆಗೆ ಬರುತ್ತದೆ ಎಂದರು.

ನೈಸ್ ವಿಚಾರದಲ್ಲಿ ನಾನು ಟಿ.ಬಿ.ಜಯಚಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಯೋಜನೆ ಅಕ್ರಮದ ಬಗ್ಗೆ ಮಾತಾಡಿದ್ದಾರೆ. ಈ ಅಕ್ರಮದ ಬಗ್ಗೆ ವರದಿ ಕೊಟ್ಟ ಸದನ ಸಮಿತಿಯ ನೇತೃತ್ವ ವಹಿಸಿದವರು ಕೂಡ ಅವರೇ. ಅದಕ್ಕಾಗಿಯೇ ನಾನು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುತ್ತೇನೆ. ನೀವು ರೈತರ ಪರವಾಗಿ ಇದ್ದರೆ, ತಕ್ಷಣ ನೈಸ್ ಹೆಚ್ಚುವರಿ ಜಮೀನು ವಾಪಸ್ ಪಡೆದು ಮೂಲ ರೈತರಿಗೆ ನೀಡಿ ಎಂದರು.

ಕಾವೇರಿ ವಿಚಾರದ ಬಗ್ಗೆ ಚರ್ಚೆ ನಡೆಸಲು ಕರೆಯಲಾಗುವ ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗುತ್ತೆನೆ. ಅಲ್ಲಿ ನಮ್ಮ ಪಕ್ಷದ ನಿಲುವನ್ನು ಸ್ಪಷ್ಟವಾಗಿ ಹೇಳಲಾಗುವುದು ಎಂದರು.

ಜೆಡಿಎಸ್ ಶಾಸಕರು ಪಕ್ಷ ಬಿಡಲ್ಲ:

ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದ ಶಾಸಕರನ್ನು ಸೆಳೆಯುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, ನಮ್ಮ ಶಾಸಕರು ಪಕ್ಷ ಬಿಡುವ ಸಾಧ್ಯತೆ ಇಲ್ಲ. ಕಾಂಗ್ರೆಸ್ ಪಕ್ಷದ 30 ಶಾಸಕರು ಪಕ್ಷ ಬಿಡಲು ಮುಂದಾಗಿದ್ದಾರೆ. ಅದನ್ನು ಸರಿ ಮಾಡಿಕೊಳ್ಳಲು ಸಾಧ್ಯ ಅಗದ ಕಾಂಗ್ರೆಸ್‌ನವರು ಬೇರೆ

ಶಾಸಕರ ಬಗ್ಗೆ ಗುಲ್ಲು ಹಬ್ಬಿಸುತ್ತಿದ್ದಾರೆ ಎಂದರು.

ಯಶವಂತಪುರ ವಿಷಯ ಬಗ್ಗೆ ಮಾತನಾಡುವುದು ಬಹಳಷ್ಟಿದೆ. ಡಿಸಿಎಂ ನೋಡಿದರೆ ಈಗ ತನಿಖೆ ಮಾಡ್ತಾ ಇದ್ದಾರೆ. ಕಳ್ಳ ಬಿಲ್ ಮಾಡಿಕೊಂಡಿರೋರನ್ನು ಕರೆದುಕೊಂಡು ಹೋಗಿ ಎನು ತನಿಖೆ ಮಾಡ್ತೀರಾ? ಎಂದರು.

ಯಶವಂತಪುರ ಕ್ಷೇತ್ರದ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದರು. ಪಕ್ಷದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷ ಜವರಾಯಿಗೌಡ, ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಹಾಜರಿದ್ದರು.