ಶಿವಮೊಗ್ಗ: ಕಳೆದ ವಾರವಷ್ಟೇ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ವಿರುದ್ಧ ಅವ್ಯವಹಾರ, ಸ್ವಜನ ಪಕ್ಷಪಾತ ಆರೋಪ ಮಾಡಿದ್ದ ಬ್ಯಾಂಕ್‌ನ ನಿರ್ದೇಶಕ ಕೆ.ಪಿ.ದುಗ್ಗಪ್ಪಗೌಡ ಶುಕ್ರವಾರ ಚನ್ನವೀರಪ್ಪ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ನಾನೇನೂ ತಪ್ಪ ಮಾಡಿಲ್ಲ. ಅವ್ಯವಹಾರ ನಡೆಸಿದ್ದರೆ, ಯಾರಿಂದಲಾದರೂ ಲಂಚ ಪಡೆದಿದ್ದು ಸಾಭೀತಾದರೆ ಕೂಡಲೇ ರಾಜೀನಾಮೆ ನೀಡುತ್ತೇನೆ ಎನ್ನುವ ಮೂಲಕ ಸುದ್ದಿಗೋಷ್ಠಿಯಲ್ಲಿ ಚನ್ನವೀರಪ್ಪ ಪರೋಕ್ಷವಾಗಿ ದುಗ್ಗಪ್ಪಗೌಡರಿಗೆ ಟಾಂಗ್ ನೀಡಿದರು.
ಇನ್ನೊಂದೆಡೆ ದುಗ್ಗಪ್ಪಗೌಡರ ಮೇಲೆ ಮುಗಿ ಬಿದ್ದ ಬ್ಯಾಂಕ್‌ನ ನಿರ್ದೇಶಕ ಜೆ.ಪಿ.ಯೋಗೇಶ್, ಒಕ್ಕಲಿಗ ಸಮುದಾಯವನ್ನು ನಮ್ಮ ಸ್ವಾಮೀಜಿ ದುಗ್ಗಪ್ಪ ಗೌಡರಿಗೆ ಜಿಪಿಎ ಬರೆದುಕೊಟ್ಟಿರಬಹುದು. ಬ್ಯಾಂಕ್‌ನಲ್ಲಿ ಎಲ್ಲ ಸಮುದಾಯದ ನಿರ್ದೇಶಕರೂ ಇದ್ದೇವೆ. ಇದು ಕೇವಲ ಒಕ್ಕಲಿಗರ ಬ್ಯಾಂಕ್ ಅಲ್ಲ. ಒಕ್ಕಲಿಗ ಸಮುದಾಯದ ಬೇರೆಯವರಿಗೆ ತೊಂದರೆಯಾದಾಗ ಸುಮ್ಮನಿದ್ದ ಅವರು ಈಗ ಮಾತನಾಡುತ್ತಿರುವುದೇಕೆ ಎಂದು ವಾಗ್ದಾಳಿ ನಡೆಸಿದರು.
ಬ್ಯಾಂಕ್‌ನ ಆರ್ಥಿಕ ಸಾಧನೆಯನ್ನು ವಿವರಿಸಲು ಕರೆದಿದ್ದ ಸುದ್ದಿಗೋಷ್ಠಿ ಹಲವು ಆಯಾಮಗಳನ್ನು ಪಡೆದಿದ್ದು ವಿಪರ್ಯಾಸವಾಗಿತ್ತು. ಡಿಸಿಸಿ ಬ್ಯಾಂಕ್ ನಿರ್ದೇಶಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬುದಕ್ಕೆ ಶುಕ್ರವಾರದ ಘಟನಾವಳಿಗಳು ನಿದರ್ಶನವಾಯಿತು.