ಕೋಲಾರದಲ್ಲಿ ಮಗಳ ಮದುವೆಗೆ ಹಣವಿಲ್ಲದೆ ನೊಂದಿದ್ದ ಕುಟುಂಬಕ್ಕೆ ಹಾಗೂ ಪಾರ್ಶ್ವವಾಯು ಪೀಡಿತ ಇಬ್ಬರಿಗೆ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದರು.  
ನ್ಯೂಸ್

ನೊಂದ ಕುಟುಂಬಕ್ಕೆ ನೆರವಾದ ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ: ಅಪಘಾತದಿಂದ ಕಾಲಿನ ಶಸ್ತ್ರಚಿಕಿತ್ಸೆಗಾಗಿ ಹಣ ಖರ್ಚು ಮಾಡಿ ಮಗಳ ಮದುವೆಗೆ ಹಣವಿಲ್ಲದೆ ನೊಂದಿದ್ದ ಕುಟುಂಬಕ್ಕೆ ಹಾಗೂ ಪಾರ್ಶ್ವವಾಯು ಪೀಡಿತ ಇಬ್ಬರಿಗೆ ಆರ್ಥಿಕ ನೆರವು ನೀಡುವ ಮೂಲಕ ಕೋಲಾರ- ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾನವೀಯತೆ ಮೆರೆದಿದ್ದಾರೆ.

ನಗರದ ಮುನೇಶ್ವರ ನಗರದ ನಿವಾಸಿ ಗಾರೆ ಕೆಲಸದಿಂದ ಜೀವನ ಸಾಗಿಸುತ್ತಿದ್ದ ನಾಗರಾಜ್​ ಎಂಬುವವರಿಗೆ ಅಪಘಾತವಾಗಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮಗಳ ಮದುವೆಗೆಂದು ಕೂಡಿಟ್ಟಿದ್ದ ಒಂದೂವರೆ ಲಕ್ಷ ಹಣವನ್ನು ಚಿಕಿತ್ಸೆಗೆ ಖರ್ಚು ಮಾಡಿದ್ದರು.

ಮಗಳ ಮದುವೆ ಮಾಡಲು ಹಣವಿಲ್ಲದೆ ಜೀವನ ನಿರ್ವಹಣೆಗೂ ಕಷ್ಟವಾಗಿತ್ತು. ಅವರ ಪತ್ನಿ ಭಾಗ್ಯಮ್ಮ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಗೋವಿಂದಗೌಡರು ಸೋಮವಾರ ಅವರ ನಿವಾಸಕ್ಕೆ ತೆರಳಿ ಆರ್ಥಿಕ ನೆರವು ನೀಡಿದರು.

ಪಾರ್ಶ್ವವಾಯು ಪೀಡಿತರಿಗೂ ನೆರವು: ನಗರದ ಮುನೇಶ್ವರ ನಗರದಲ್ಲಿ ಪತಿಯನ್ನು ಕಳೆದುಕೊಂಡಿದ್ದರೂ ಎದೆಗುಂದದೆ 10 ವರ್ಷಗಳಿಂದ ಹೂವು ಮಾರಿ ಮಗಳೊಂದಿಗೆ ಕುಟುಂಬ ನಿರ್ವಹಿಸುತ್ತಿದ್ದ ಭಾಗ್ಯಮ್ಮ ಎಂಬ ಮಹಿಳೆ ಇತ್ತೀಚೆಗೆ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದು ಅನ್ನಕ್ಕೂ ಕಷ್ಟಪಡುತ್ತಿದ್ದರು. ಈ ಬಗ್ಗೆ ಮುಖಂಡ ಬೆಟ್ಟಪ್ಪ ಮತ್ತಿತರರಿಂದ ಮಾಹಿತಿ ಪಡೆದ ಗೋವಿಂದಗೌಡರು, ಆಕೆಗೂ ಆರ್ಥಿಕ ನೆರವು ನೀಡಿದರು.

ಮಕ್ಕಳಿಲ್ಲವೆಂಬ ಚುಚ್ಚುಮಾತಿನಿಂದ ಮನನೊಂದಿದ್ದ ನಗರದ ಕಾರಂಜಿಕಟ್ಟೆ 8ನೇ ಕ್ರಾಸ್​ನ ಮಹಿಳೆ ಗಾಯತ್ರಿ ಇತ್ತೀಚೆಗೆ ಮಾನಸಿಕ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರು.

ಈಕೆಗೆ ತಂದೆ ಇಲ್ಲದಿದ್ದರಿಂದ ತಾಯಿಯೇ ಆಸರೆಯಾಗಿದ್ದರು. ತಾಯಿ ಕೂಲಿ ಮಾಡಿ ಮಗಳನ್ನು ಸಾಕುತ್ತಿದ್ದರು. ಆಕೆಯ ಪತಿ ಈಕೆಯನ್ನು ತವರು ಮನೆಯಲ್ಲೇ ಬಿಟ್ಟಿದ್ದ. ಇವರಿಗೂ ಗೋವಿಂದಗೌಡರು ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.