ಆರ್.ಎಂ.ಮಂಜುನಾಥ ಗೌಡ 
ನ್ಯೂಸ್

ಡಿಸಿಸಿ ಬ್ಯಾಂಕ್‌ಗೆ ರೂ. 18.24 ಕೋಟಿ ನಿವ್ವಳ ಲಾಭ

ಶಿವಮೊಗ್ಗ : ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ ಇದೇ ಮೊದಲ ಬಾರಿಗೆ 46 ಕೋಟಿ ರೂ. ಲಾಭ ಗಳಿಸಿದೆ. ಇದರಲ್ಲಿ ನಿವ್ವಳ ಲಾಭದ ಪ್ರಮಾಣ 18.24 ಕೋಟಿ ರೂಪಾಯಿ. ಇದೊಂದು ಐತಿಹಾಸಿಕ ಸಾಧನೆ ಎಂದು ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ 3,464.50 ಕೋಟಿ ರೂ. ವ್ಯವಹಾರ ನಡೆಸಿದೆ. ಹಲವು ವಿಷಯದಲ್ಲಿ ನಮ್ಮ ಬ್ಯಾಂಕ್ ಬೇರೆಲ್ಲ ಡಿಸಿಸಿ ಬ್ಯಾಂಕ್‌ಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ನಬಾರ್ಡ್, ಆರ್‌ಬಿಐನ ಎಲ್ಲ ಮಾರ್ಗಸೂಚಿಗಳನ್ನು ವ್ಯವಸ್ಥಿತವಾಗಿ ಪಾಲಿಸುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರ 7ನೇ ವೇತನ ಆಯೋಗ ಜಾರಿಗೊಳಿಸುವ ಮುನ್ನವೇ ನಮ್ಮ ಬ್ಯಾಂಕ್‌ನ ಸಿಬ್ಬಂದಿಗೆ 7ನೇ ವೇತನ ಆಯೋಗದ ಅನ್ವಯ ವೇತನ ನೀಡಲಾಗುತ್ತಿದೆ. ಸಿಬ್ಬಂದಿಗೆ 5 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಜಾರಿಗೊಳಿಸಲಾಗಿದೆ. ಇದು ರಾಜ್ಯದ ಯಾವ ಡಿಸಿಸಿ ಬ್ಯಾಂಕ್‌ನಲ್ಲೂ ಇಲ್ಲ ಎಂದರು.

ಕೃಷಿ ಹಾಗೂ ಕೃಷಿಯೇತರ ಸಾಲ ನೀಡಿಕೆ, ವಸೂಲಾತಿ ಎಲ್ಲದರಲ್ಲೂ ಬ್ಯಾಂಕ್ ಮಾದರಿ. ಅನುತ್ಪಾದಕ ಸಾಲದ ಪ್ರಮಾಣ ತೀರಾ ಕಡಿಮೆಯಿದೆ. ಕೃಷಿ ಸಾಲ ಮರುಪಾವತಿ ಶೇ.99.60 ಇದ್ದರೆ ಕೃಷಿಯೇತರ ಸಾಲದ ವಸೂಲಾತಿ ಶೇ.88.89 ಇದೆ. ಬೇರೆ ಡಿಸಿಸಿ ಬ್ಯಾಂಕ್‌ಗಳು ಸಕ್ಕರೆ ಕಾರ್ಖಾನೆಗಳಿಗೆ ದೊಡ್ಡ ಪ್ರಮಾಣದ ಸಾಲ ನೀಡಿವೆ. ಆದರೆ ನಾವು ನೀಡಿರುವ ಸಾಲದ ಪ್ರಮಾಣ ತೀರಾ ಕಡಿಮೆ. ನೀಡಿರುವ ಸಾಲದ ವಸೂಲಾತಿಯೂ ಸರಿಯಾಗಿ ನಡೆಯುತ್ತಿದೆ ಎಂದು ಹೇಳಿದರು.

ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಜಿ.ಎನ್.ಸುಧೀರ್, ಕೆ.ಪಿ.ದುಗ್ಗಪ್ಪ ಗೌಡ, ಎ.ಎ.ಪರಮೇಶ್, ಸಿ.ಹನುಮಂತು, ಹಿರಿಯ ಸಹಕಾರಿ ಶಿವಶಂಕರ್, ಸಿಇಒ ಅನ್ನಪೂರ್ಣಾ ಸುದ್ದಿಗೋಷ್ಠಿಯಲ್ಲಿದ್ದರು.