ಕೋಲಾರದಲ್ಲಿ ಮಂಗಳವಾರ ರಾಜ್ಯ ಸಹಕಾರ ಸಂಘಗಳ ಮಹಾನಿಬಂಧಕರಾಗಿದ್ದು, ನಿವೃತ್ತರಾಗುತ್ತಿರುವ ಎಸ್​.ಜಿಯಾವುಲ್ಲಾ ಅವರನ್ನು ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸನ್ಮಾನಿಸಿದರು. ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಶಿಢ್ಲಘಟ್ಟ ನಾಗರಾಜ್​, ನಿರ್ದೇಶಕರಾದ ನಾಗನಾಳ ಸೋಮಣ್ಣ ಇದ್ದರು. 
ನ್ಯೂಸ್

ಬ್ಯಾಂಕ್​ ಉನ್ನತಿಗೆ ನೀಡಿದ ಸಹಕಾರ ಸ್ಮರಣೀಯ; ಸಹಕಾರ ಸಂಘಗಳ ನಿಬಂಧಕ ಜಿಯಾವುಲ್ಲಾ ಬೀಳ್ಕೊಡುಗೆ ಸಮಾರಂಭದಲ್ಲಿ ಗೋವಿಂದಗೌಡ ಅಭಿಮತ

Kolar

ಕೋಲಾರ: ದಿವಾಳಿಯಾಗಿದ್ದ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ಗೆ ಮರು ಜೀವ ನೀಡುವ ಆಡಳಿತ ಮಂಡಳಿಯ ಪ್ರಯತ್ನಕ್ಕೆ ಸಹಕಾರ ಇಲಾಖೆ ನೀಡಿದ ಸಹಕಾರ, ಮಾರ್ಗದರ್ಶನ ಸ್ಮರಣೀಯ ಎಂದು ಬ್ಯಾಂಕ್​ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ನಗರದಲ್ಲಿ ರಾಜ್ಯ ಸಹಕಾರ ಸಂಘಗಳ ಮಹಾನಿಬಂಧಕರಾಗಿದ್ದು, ನಿವೃತ್ತರಾಗುತ್ತಿರುವ ಎಸ್​.ಜಿಯಾವುಲ್ಲಾ ಅವರನ್ನು ಡಿಸಿಸಿ ಬ್ಯಾಂಕ್​ನಿಂದ ಮಂಗಳವಾರ ಸನ್ಮಾನಿಸಿ ಬೀಳ್ಕೊಟ್ಟು ಮಾತನಾಡಿದರು.

ಬಡವರು, ರೈತರು, ಮಹಿಳೆಯರಿಗೆ ಆರ್ಥಿಕವಾಗಿ ಬಲ ತುಂಬಬೇಕಾಗಿದ್ದ ಡಿಸಿಸಿ ಬ್ಯಾಂಕ್​ 2004ಕ್ಕಿಂತ ಮುಂಚೆ ಆರ್ಥಿಕವಾಗಿ ದಿವಾಳಿಯಾಗಿತ್ತು. ಆಗ ಬ್ಯಾಂಕ್​ ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿಸಿಸಿ ಬ್ಯಾಂಕಿನೊಂದಿಗೆ ವಿಲೀನ ಮಾಡುವ ಪ್ರಯತ್ನವೂ ನಡೆದಿತ್ತು ಎಂದು ಸ್ಮರಿಸಿದರು.

ಕೋಲಾರ ಡಿಸಿಸಿ ಬ್ಯಾಂಕಿನ ಪ್ರತಿನಿಧಿಗಳು ಅಪೆಕ್ಸ್​ ಬ್ಯಾಂಕ್​, ನಬಾರ್ಡ್​, ಸಹಕಾರ ಇಲಾಖೆಗೆ ಹೋದರೆ ನಮ್ಮನ್ನು ನೋಡುತ್ತಿದ್ದ ರೀತಿಯೇ ಬೇರೆಯಾಗಿತ್ತು. ಹಾಳಾದ ಊರಿಗೆ ಇವರು ಯಜಮಾನರು ಎಂಬಂತೆ ಬಿಂಬಿಸುತ್ತಿದ್ದರು. ಆದರೆ ಇಂದು ಅದೇ ಹಾಳಾದ ಊರು ಸಾವಿರಾರು ಗ್ರಾಮಗಳ ಲಕ್ಷಾಂತರ ಮಹಿಳೆಯರ ಪಾಲಿಗೆ ದೇವಾಲಯವಾಗಿದೆ. ಆರ್ಥಿಕ ಶಕ್ತಿ ತುಂಬಿ ಮೀಟರ್​ ಬಡ್ಡಿ ಶೋಷಣೆಯಿಂದ ಪಾರು ಮಾಡಿದೆ ಎಂದು ತಿಳಿಸಿದರು.

ಸಂಕಷ್ಟದ ಸಮಯದಲ್ಲಿ ಆಡಳಿತ ಮಂಡಳಿ ಬ್ಯಾಂಕ್​ನ ಅಧಿಕಾರದ ಚುಕ್ಕಾಣಿ ಹಿಡಿದಾಗ ಅನೇಕರು ನಮ್ಮನ್ನು ಬಿದ್ದುಹೋದ ಮನೆಗೆ ವಾರಸುದಾರರು ಎಂದೆಲ್ಲಾ ವ್ಯಂಗ್ಯವಾಡಿದ್ದರು. ಆದರೆ ಇಂದು ಬ್ಯಾಂಕಿಗೆ ಮರು ಜೀವ ಬಂದಿದ್ದು, ರಾಜ್ಯದ ನಂ.1 ಬ್ಯಾಂಕಾಗಿ ಬೆಳೆದು ನಿಂತಿದೆ. ಇದಕ್ಕೆ ಸಹಕಾರ ನೀಡಿದ ಸಹಕಾರ ಸಂಘಗಳ ಮಹಾ ನಿಬಂಧಕ ಜಿಯಾವುಲ್ಲಾ ಅವರನ್ನು ಮರೆಯುವ ಹಾಗಿಲ್ಲ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಶಿಢ್ಲಘಟ್ಟ ನಾಗರಾಜ್​, ನಿರ್ದೇಶಕರಾದ ನಾಗನಾಳ ಸೋಮಣ್ಣ, ಹನುಮಂತರೆಡ್ಡಿ, ಎಚ್​.ವಿ.ನಾಗರಾಜ್​, ಮುಖಂಡ ಶಶಿಧರ್​, ಕೆಂಪಣ್ಣ ಮತ್ತಿತರರಿದ್ದರು.

ಬಡವರು, ರೈತರು, ಮಹಿಳೆಯರನ್ನು ಗೌರವದಿಂದ ನಡೆಸಿಕೊಂಡು ಅವರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಸಹಕಾರಿ ರಂಗದಿಂದ ಮಾತ್ರವೇ ಸಾಧ್ಯವಿದೆ. ವಾಣಿಜ್ಯ ಬ್ಯಾಂಕುಗಳು ಬಡವರನ್ನು ಒಳಗೆ ಸಹ ಸೇರಿಸುವುದಿಲ್ಲ ಎಂಬ ಸತ್ಯದ ಅರಿವಿದೆ. ಸಹಕಾರ ರಂಗವೆಂದರೆ ಬಡವರ ಆಶ್ರಯಧಾಮ ಎಂಬ ಸತ್ಯವನ್ನು ಸಾಬೀತುಪಡಿಸಿ ಅವಿಭಜಿತ ಜಿಲ್ಲೆಯ ಪ್ರತಿ ಕುಟುಂಬವೂ ಸಹಕಾರ ಸಂಘಗಳ ಸದಸ್ಯತ್ವ ಪಡೆಯುವಂತೆ ಮಾಡುವುದು ನಮ್ಮ ಸಂಕಲ್ಪವಾಗಿದೆ.

| ಬ್ಯಾಲಹಳ್ಳಿ ಗೋವಿಂದಗೌಡ, ಅಧ್ಯಕ್ಷ, ಡಿಸಿಸಿ ಬ್ಯಾಂಕ್