ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ನರಸಾಪುರ ಸೊಸೈಟಿಗೆ ಭೇಟಿ ನೀಡಿ ಸಿಇಒ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. 
ನ್ಯೂಸ್

ಬದ್ಧತೆ ಇಲ್ಲದವರು ಬ್ಯಾಂಕಿಗೆ ಬೇಡ: ಸಿಇಒಗಳ ವಿರುದ್ಧ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಿಡಿಮಿಡಿ

Kolar

ಕೋಲಾರ: ನಾನು ರಾಜಕಾರಣಕ್ಕಿಂತ ಡಿಸಿಸಿ ಬ್ಯಾಂಕ್ ಮೂಲಕ ಬಡವರಿಗೆ ಕೈಲಾದಷ್ಟು ಒಳ್ಳೆಯ ಸೇವೆ ಕಲ್ಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವೆ, ಬದ್ಧತೆ ಇಲ್ಲದ ಸಿಇಒಗಳನ್ನು ಇಟ್ಟುಕೊಂಡು ಗುರಿ ಸಾಧಿಸಲು ಕಷ್ಟವಾಗುತ್ತದೆ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಗುಡುಗಿದರು.

ತಾಲೂಕಿನ ನರಸಾಪುರದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುರುವಾರ ಸಂಘಗಳ ಗಣಕೀಕರಣ ವ್ಯವಸ್ಥೆ ಹಾಗೂ ಸಾಲ ವಿತರಣೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ನಾನು ಅಧ್ಯಕ್ಷನಾಗುವ ಮುನ್ನ ಡಿಸಿಸಿ ಬ್ಯಾಂಕ್‌ನಲ್ಲಿ ಆದ ಕೆಲ ವ್ಯತ್ಯಾಸಗಳಿಂದಾಗಿ ಬ್ಯಾಂಕ್ ದಿವಾಳಿಯಾಗಿತ್ತು, ರೈತರು, ಬಡ ಮಹಿಳೆಯರು ಸಾಲ ಸೌಲಭ್ಯದಿಂದ ವಂಚಿತರಾಗಿದ್ದರು. ನಾವದನ್ನು ಸರಿಪಡಿಸಿ ಪ್ರತಿಯೊಬ್ಬರಿಗೂ ಸಾಲ ಸಿಗುವಂತೆ ಕ್ರಮ ಕೈಗೊಂಡಿದ್ದೇವೆ, ಆದರೆ ನಿಮ್ಮಂತಹ ಸಿಇಒಗಳಿಂದ ಸಹಕಾರಿ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಸಂಘದ ದಾಖಲೆಗಳ ನಿರ್ವಹಣೆ ಸರಿಯಾಗಿ ಮಾಡದಿದ್ದರೆ ನಾನು ಹೊಣೆಯಾಗಬೇಕೇ? ನಿನ್ನಂತಹ ಸಿಇಒಗಳಿಂದ ನಾನು ಮತ್ತು ನಿರ್ದೇಶಕರು ತಲೆ ತಗ್ಗಿಸಬೇಕೇ ಎಂದು ತರಾಟೆ ತೆಗೆದುಕೊಂಡರು.

ಸರಿಯಾಗಿ ಕಾರ್ಯ ನಿರ್ವಹಿಸದ ಸಿಇಒ ಅವರನ್ನು ಮನೆಗೆ ಕಳುಹಿಸುವ ಬದಲು ಆಡಳಿತ ಮಂಡಳಿಯವರು 30 ಕೋಟಿಗೂ ಅಧಿಕ ವಹಿವಾಟನ್ನು ಸಿಬ್ಬಂದಿಗೆ ವಹಿಸಿ ತೆಪ್ಪಗೆ ಕೂತಿರುವುದು ಸರಿಯಲ್ಲ, ಸಹಕಾರ ಸಂಘಗಳ ಸಿಇಒ ಸರಿಹೋದರೆ ಎಲ್ಲವೂ ಸರಿಹೋಗುತ್ತದೆ, ಸಿಬ್ಬಂದಿಯನ್ನೂ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳಲಾಗದವರು ಸಂಘದಲ್ಲಿ ಇರಲು ಯೋಗ್ಯರಲ್ಲ ಎಂದು ಗುಡುಗಿದರು.

ಸಾಲ ಮರುಪಾವತಿಯ ನಗದು ಪುಸ್ತಕದಲ್ಲಿ ಸಮರ್ಪಕ ದಾಖಲಾತಿ ಇಲ್ಲದ್ದನ್ನು ಕಂಡು ಸಿಡಿಮಿಡಿಗೊಂಡು ಕೂಡಲೇ ಕ್ರಿಮಿನಲ್ ಕೇಸ್ ದಾಖಲಿಸಿ ಎಂದು ಆಡಳಿತ ಮಂಡಳಿಗೆ ಸೂಚಿಸಿದರು. ನಂತರ ಕ್ಯಾಲನೂರು ಸೊಸೈಟಿಗೆ ಭೇಟಿ ನೀಡಿ ಆಡಳಿತ ಮಂಡಳಿಯವರಿಗೆ ರಾಜಕೀಯ ಮುಖ್ಯವಾಗಿದೆ ಎಂದು ಕಿಡಿಕಾರಿದರು.

ಪ್ಯಾಕ್ಸ್ ಚೆನ್ನಾಗಿದ್ದರೆ ರೈತರ, ಮಹಿಳೆಯರ ಹಿತ ಕಾಯಲು ಸಾಧ್ಯ. ಸ್ವಾರ್ಥ ಬಿಟ್ಟು ಕೆಲಸ ಮಾಡಬೇಕು. ಸಿಬ್ಬಂದಿ ಕಡತಗಳ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು. ಡಿಸಿಸಿ ಬ್ಯಾಂಕ್ ಬದಲು ಕೆನೆರಾ ಬ್ಯಾಂಕಿನಲ್ಲಿ ವ್ಯವಹಾರ ನಡೆಸುತ್ತಿರುವ ಪ್ಯಾಕ್ಸ್ ಅಧ್ಯಕ್ಷರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅವಕಾಶ ನೀಡಿದ್ದರೂ ನಿರ್ಲಕ್ಷ್ಯ ತೋರಿದ್ದೀರಿ, ಇಬ್ಬರು ಮಾತ್ರ ಕಚೇರಿ ಕೆಲಸ ಮಾಡುತ್ತಿದ್ದಾರೆ. ಒತ್ತಡ ಹೆಚ್ಚಿದೆ, ಒಬ್ಬನಿಂದ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ನಾನೂ ಕೆಲಸ ಬಿಡುತ್ತೇನೆ ಎಂದು ಎಂಡಿ ನವೀನ್ ನೋವು ತೋಡಿಕೊಂಡರು. ಸೊಸೈಟಿ ಸೊಸೈಟಿಯಾಗೇ ಉಳಿಯಬೇಕು, ಅಗತ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಿ ಎಂದು ಸೂಚಿಸಿ, ಠೇವಣಿ ಗುರಿ ಸಾಧನೆಯಾಗದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಜಿಲ್ಲೆಯಲ್ಲೇ ಅತಿ ಹೆಚ್ಚು ಕೆಸಿಸಿ ಬೆಳೆಸಾಲವನ್ನು ನರಸಾಪುರ ಸೊಸೈಟಿ ವ್ಯಾಪ್ತಿಯಲ್ಲಿ ನೀಡಿದ್ದೇವೆ. ಇಲ್ಲಿನ ಆಡಳಿತ ಮಂಡಳಿ ಜವಾಬ್ದಾರಿ ಮರೆತು ಕೋಟಿಗಟ್ಟಲೆ ವಹಿವಾಟನ್ನು ಸಿಬ್ಬಂದಿಗೆ ವಹಿಸಿ ಕಣ್ಮುಚ್ಚಿ ಕುಳಿತಿದೆ. ಹೀಗೆ ಮಾಡಿದರೆ ಮುಂದೆ ಕೆಟ್ಟಹೆಸರು ಯಾರಿಗೆ ಬರುತ್ತದೆ ಎಂಬ ಅರಿವಿದೆಯೇ ಎಂದರು.

ನಿರ್ದೇಶಕ ಯಲವಾರ ಸೊಣ್ಣೇಗೌಡ ನರಸಾಪುರದಲ್ಲಿ ಸಾಲ ವಸೂಲಾತಿ ದಾಖಲೆಗಳ ನಿರ್ವಹಣೆಯಲ್ಲಿನ ವೈಲ್ಯಗಳ ಕುರಿತು ಮಾತನಾಡಿ, ನಿಮ್ಮಂತೋರು ಇದ್ದರೆ ಸೊಸೈಟಿಗಳು ಉಳಿಯುವುದೇ ಎಂದು ಪ್ರಶ್ನಿಸಿ, ಬದ್ಧತೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು. ಬ್ಯಾಂಕ್ ಎಂಡಿ ಶಿವಕುಮಾರ್, ಎಜಿಎಂಗಳಾದ ಬೈರೇಗೌಡ, ಸೂಪರ್‌ವೈಸರ್ ಅಮೀನಾ, ನರಸಾಪುರ ಅಧ್ಯಕ್ಷ ಕೆ.ಎಂ.ಮುನಿರಾಜು, ಕ್ಯಾಲನೂರು ಅಧ್ಯಕ್ಷ ರಾಮಾಂಜನಪ್ಪ, ಸುಗಟೂರು ಭಾಸ್ಕರ್ ಹಾಗೂ ವಿವಿಧ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರು ಹಾಜರಿದ್ದರು.

ರೈತರು, ಮಹಿಳೆಯರಿಗೆ ಸೊಸೈಟಿಗಳ ಕುರಿತು ನಂಬಿಕೆ ಮೂಡಿಸಲು ದೇಶದಲ್ಲೇ ಮೊದಲಿಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕೆ ಒತ್ತು ನೀಡಿದ್ದೇವೆ, ಭ್ರಷ್ಟಾಚಾರಕ್ಕೆ ಕೊನೆಯಾಡಲು ಅಂದಿನ ವಹಿವಾಟು ಮಾಹಿತಿ ಅದೇ ಕ್ಷಣದಲ್ಲೇ ಆನ್‌ಲೈನ್‌ಗೆ ಅಪ್‌ಲೋಡ್ ಆಗುವುದರಿಂದ ಪಾರದರ್ಶಕತೆ ಮೂಡುತ್ತದೆ. ಕೆ.ವಿ.ದಯಾನಂದ್, ಡಿಸಿಸಿ ನಿರ್ದೇಶಕ