ಶ್ರೀನಿವಾಸಪುರ : ಡಿಸಿಸಿ ಬ್ಯಾಂಕ್ ವಿಷಯದಲ್ಲಿ ನನ್ನ ಹೊಟ್ಟೆಗೆ ಪೆಟ್ರೋಲ್ ಹಾಕಿದ್ದಾರೆ. ನಾನು ಇನ್ನು ಸುಮ್ಮನಿರುವುದಿಲ್ಲ. ಕೋಲಾರ-ಚಿಕ್ಕಬಳ್ಳಾಪುರ ಹಾಗೂ ಡಿಸಿಸಿ ಬ್ಯಾಂಕ್ ನನ್ನದೇ ಅಂದರೂ ಪರ‌್ವಾಗಿಲ್ಲ. ಚಾಲೆಂಜ್ ಮಾಡಿ ಹೇಳುತ್ತೇನೆ, ಬ್ಯಾಂಕ್ ಮುಚ್ಚಲು ಬಂದವರನ್ನು ಒದ್ದೋಡಿಸುವವರೆಗೆ ಸುಮ್ಮನಿರುವುದಿಲ್ಲ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಎಚ್ಚರಿಕೆ ನೀಡಿದರು.
ಶುಕ್ರವಾರ ತಾಪಂ ಸಭಾಂಗಣದಲ್ಲಿ ತಾಲೂಕು ಸೊಸೈಟಿಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿ, ಮುಚ್ಚಿದ್ದ ಡಿಸಿಸಿ ಬ್ಯಾಂಕನ್ನು ಮತ್ತೆ ಪ್ರಾರಂಭಿಸಿ ಎರಡು ಜಿಲ್ಲೆಗಳ ರೈತರಿಗೆ ಮತ್ತು ಸ್ತ್ರೀಶಕ್ತಿ ಸಂಘಗಳಿಗೆ ಪಕ್ಷಾತೀತವಾಗಿ ಸಾಲ ನೀಡುವ ಯೋಜನೆ ರೂಪಿಸಲಾಗಿದೆ. ಇದನ್ನು ಸಹಿಸದೆ ಕೆಲವರು ರಮೇಶ್ ಕುಮಾರ್ ಬ್ಯಾಂಕೆಂದು ಹೇಳುತ್ತಿದ್ದಾರೆ. ನಾನಾಗಲಿ, ಬ್ಯಾಂಕಿನ ಅಧ್ಯಕ್ಷ ಗೋವಿಂದಗೌಡರಾಗಲಿ ಹಣವನ್ನು ಮನೆಗೆ ತೆಗೆದುಕೊಂಡು ಹೋಗಿದ್ದರೆ ಜನರೇ ಅದಕ್ಕೆ ಉತ್ತರ ಕೊಡುತ್ತಾರೆ. ಆರೋಪ ಮಾಡುವವರು ಯಾವ ವೇದಿಕೆಗೆ ಬೇಕಾದರೂ ಬರಲಿ ಚರ್ಚೆಗೆ ಸಿದ್ಧ. ಕೆಲವರಿಗೆ ದಿನನಿತ್ಯ ಡಿಸಿಸಿ ಬ್ಯಾಂಕಿನದ್ದೇ ಚಿಂತೆಯಾಗಿದೆ. ಏನಾದರು ಮಾಡಿ ಅದನ್ನು ಮುಚ್ಚಿಸಬೇಕು ಎಂಬುದು ಅವರ ಉದ್ದೇಶ ಎಂದರು.
ಪಾರದರ್ಶಕವಾಗಿ ಸಾಲ ನೀಡುತ್ತಿದ್ದರೂ ಅದನ್ನು ಸಹಿಸಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ವಿರುದ್ಧ ದೂರು ನೀಡುವುದೇ ಅವರ ಕಾಯಕ. ಇನ್ನು ಮುಂದೆ ರೈತರಿಗೆ ಶೂನ್ಯಬಡ್ಡಿ ದರದಲ್ಲಿ ಸಾಲ ನೀಡುವುದು ಒಂದು ಆಂದೋಲನವಾಗಬೇಕು ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜಿಪಂ ಮಾಜಿ ಸದಸ್ಯ ಗೋವಿಂದಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಸಂಜಯ್‌ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯೋಗೇಂದ್ರಗೌಡ ಉಪಸ್ಥಿತರಿದ್ದರು.
ಪಕ್ಷಭೇದವಿಲ್ಲದೆ ಆರ್ಹ ರೈತರಿಗೆ ಸಾಲ ನೀಡುವ ಕೆಲಸವಾಗಬೇಕು. ನಾನೇ ಕುಳಿತು ಅರ್ಹರಿಗೆ ಎಲ್ಲ ದಾಖಲೆ ನೀಡುವಂತೆ ಮಾಡುತ್ತೇನೆ. ತಹಸೀಲ್ದಾರ್ ಶ್ರೀನಿವಾಸ್ ಈ ಜವಾಬ್ದಾರಿ ತೆಗೆದುಕೊಳ್ಳಬೇಕು. ಅನಗತ್ಯವಾಗಿ ರೈತರನ್ನು ಕಚೇರಿಗಳಿಗೆ ಅಲೆಸುವುದು ನಿಲ್ಲಬೇಕು. ಇಲ್ಲವಾದರೆ ಗ್ರಹಚಾರ ನೆಟ್ಟಗಿರುವುದಿಲ್ಲ. ಕೆ.ಆರ್.ರಮೇಶ್‌ಕುಮಾರ್, ಶಾಸಕ