ಕೆಜಿಎಫ್ : ಮಹಿಳೆ ಎಲ್ಲ ರಂಗದಲ್ಲೂ ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ಸ್ತ್ರೀಶಕ್ತಿ ಸಂಘಗಳಿಗೆ ಬೆನ್ನೆಲುಬಾಗಿ ನಿಲ್ಲುವ ಕೆಲಸ ಮಾಡುತ್ತಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ನಗರದ ಕಿಂಗ್‌ಜಾರ್ಜ್ ಹಾಲ್‌ನಲ್ಲಿ ಶುಕ್ರವಾರ 29 ಸ್ತ್ರೀಶಕ್ತಿ ಸಂಘಗಳಿಗೆ 1.45 ಕೋಟಿ ರೂ.ಸಾಲ ಮತ್ತು ಎಟಿಎಂ ಕಾರ್ಡ್ ವಿತರಣೆ ಮಾಡಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕೆಲಸವಿಲ್ಲದೆ ಮಹಿಳೆಯರು ಮನೆಯಲ್ಲಿ ಕಷ್ಟವನ್ನು ಅನುಭವಿಸುವ ಜತೆಗೆ ಸಂಸಾರ ನಿರ್ವಹಿಸಲು ಶ್ರಮವಹಿಸಿದ್ದಾರೆ. ಮನೆಯಲ್ಲಿ ಕೆಲಸವಿಲ್ಲದ ಸಂದರ್ಭವನ್ನು ಊಹಿಸಿಕೊಳ್ಳುವುದು ಕಷ್ಟ. ಇಂತಹ ಸಂದರ್ಭದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದರೆ ಕಷ್ಟ ನೀಗಿಸುವುದು ಸುಲಭ ಎಂದರು.
ಎಷ್ಟೋ ರಾಷ್ಟ್ರೀಯ ಬ್ಯಾಂಕ್‌ಗಳು ಮಹಿಳೆಯರನ್ನು ನಂಬಿ ಸಾಲ ಕೊಡುವುದಿಲ್ಲ. ಆದರೆ ಡಿಸಿಸಿ ಬ್ಯಾಂಕ್ ಮಹಿಳೆಯರನ್ನು ನಂಬುತ್ತದೆ. ಅವರು ಎಂದಿಗೂ ಮಾತೃ ಸಂಸ್ಥೆಗೆ ಮೋಸ ಮಾಡುವುದಿಲ್ಲ ಎಂಬ ಭರವಸೆ ಹೊಂದಿದೆ. ಆದ್ದರಿಂದಲೇ ಮನೆ ಬಾಗಿಲಿಗೆ ಹೋಗಿ ಸಾಲ ವಿತರಣೆ ಮಾಡಲಾಗುತ್ತಿದೆ. ಮಹಿಳೆಯರೂ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಬೆಮೆಲ್ ನಗರದ ಬಳಿ ಶ್ರೀ ಜನನಿ ಇಂಡಿಯಾ ಡಿಸೈನ್ ಎಂಬ ಹೆಸರಿನಲ್ಲಿ ಗಾರ್ಮೆಂಟ್ಸ್ ತೆರೆಯಲಾಗುತ್ತಿದೆ. ಎಲ್ಲ ಅರ್ಹ ಮಹಿಳೆಯರಿಗೆ ಉದ್ಯೋಗ ಹಾಗೂ ತರಬೇತಿ ನೀಡಲಾಗುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಕರೊನಾ ಸಂದರ್ಭದಲ್ಲಿ ಜನ ಕಷ್ಟದಲ್ಲಿದ್ದಾರೆ. ಅವರಿಗೆ ಸಾಲ ನೀಡುವ ಜತೆಗೆ ಕೆಲಸ ನೀಡಿದರೆ ಅವರು ಆರ್ಥಿಕವಾಗಿ ಸಬಲರಾಗುತ್ತಾರೆ ಎಂದರು.
ಮಹಿಳೆಯರು ಮನೆಯಲ್ಲಿ ದುಡ್ಡಿಡುವ ಅವಶ್ಯಕತೆ ಕಡಿಮೆ ಮಾಡಲು ಬ್ಯಾಂಕ್ ಎಟಿಎಂ ಕಾರ್ಡ್‌ಗಳನ್ನು ಎಲ್ಲ ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ವೈಯಕ್ತಿಕ ಸಾಲ 50 ಸಾವಿರದಿಂದ 1 ಲಕ್ಷಕ್ಕೆ ಏರಿಸಲು ಯೋಚಿಸಲಾಗುತ್ತಿದೆ ಎಂದರು.
ನಗರಸಭೆ ಸದಸ್ಯರಾದ ಕರುಣಾಕರನ್, ವೇಣುಗೋಪಾಲ್, ರಮೇಶ್, ಪ್ರವೀಣ್, ಮುಖಂಡರಾದ ಪ್ರಸನ್ನ, ಪದ್ಮನಾಭರೆಡ್ಡಿ, ಮೊದಲೈಮುತ್ತು, ಮುನಿಸ್ವಾಮಿ ಇತರರಿದ್ದರು.