ಹನಗೋಡು: ಹೋಬಳಿಯ ಹೆಬ್ಬಾಳ ಗಿರಿಜನ ಪುನರ್ವಸತಿ ಕೇಂದ್ರಕ್ಕೆ ಸೋಮವಾರ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಭೇಟಿನೀಡಿ ಆದಿವಾಸಿಗಳ ಸಮಸ್ಯೆ ಆಲಿಸಿದರು.
ಹೆಬ್ಬಾಳ ಗಿರಿಜನ ಪುನರ್ವಸತಿ ಕೇಂದ್ರದ ನಿವಾಸಿಗಳು ಕಳೆದ 3-4 ತಿಂಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಪುನರ್ವಸತಿ ಯೋಜನೆಯ ಪ್ಯಾಕೇಜ್‌ನಲ್ಲಿರುವ ಉಳಿತಾಯ ಹಣದಲ್ಲಿ ಕೇಂದ್ರದ ಅಭಿವೃದ್ಧಿ ಹಾಗೂ ಜಮೀನಿನ ಸುತ್ತ ತಂತಿಬೇಲಿ ನಿರ್ಮಾಣ ಹಾಗೂ ಕೇಂದ್ರದಲ್ಲಿ ವಾಸವಿರುವ 33 ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿಕೊಡಬೇಕೆಂಬ ಮನವಿ ಸಲ್ಲಿಸಿದ್ದರು.
ಅವರ ಮನವಿ ಮೇರೆಗೆ ಸೋಮವಾರ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಮಹೇಶ್‌ಕುಮಾರ್ ಮತ್ತು ತಹಸೀಲ್ದಾರ್ ಬಸವರಾಜ್ ಅವರೊಂದಿಗೆ ಭೇಟಿ ನೀಡಿ ಕೇಂದ್ರದ ಆದಿವಾಸಿಗಳೊಂದಿಗೆ ಚರ್ಚೆ ನಡೆಸಿದರು.
ಶೀಘ್ರವೇ ಜಮೀನುಗಳ ಪೋಡು: ಹೆಬ್ಬಾಳ ಹಾಗೂ ಶೆಟ್ಟಹಳ್ಳಿ-ಲಕ್ಕಪಟ್ಟಣ ಗಿರಿಜನರ ಪುನರ್ವಸತಿ ಕೇಂದ್ರದ ಜಮೀನುಗಳಿಗೆ ಸಾಗುವಳಿ ಪತ್ರ ಮತ್ತು ಆರ್‌ಟಿಸಿ ಮಾತ್ರ ನೀಡಿದ್ದು, ಇನ್ನು ನಮ್ಮ ಜಮೀನುಗಳು ಪಕ್ಕಾ ಪೋಡು ಆಗಿಲ್ಲ. ಇದರಿಂದ ಆಜುಬಾಜಿನ ಪ್ರಭಾವಿ ವ್ಯಕ್ತಿಗಳು ನಮ್ಮ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಪ್ರಶ್ನಿದರೆ ಬೆದರಿಸುತ್ತಾರೆ, ಆದ್ದರಿಂದ ಪುನರ್ವಸತಿ ಕೇಂದ್ರದ ಜಮೀನುಗಳನ್ನು ಪಕ್ಕಾ ಪೋಡು ಮಾಡಿಕೊಡಬೇಕೆಂದು ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರದ ಮಾಜಿ ಅಧ್ಯಕ್ಷ ಹಾಗೂ ಆದಿವಾಸಿ ಮುಖಂಡ ಜೆ.ಟಿ.ರಾಜಪ್ಪರ ಮನವಿಗೆ ಈಗಾಗಲೇ ಕೇಂದ್ರದ ಎಲ್ಲ ಜಮೀನುಗಳನ್ನು (1ಟು5) ಒನ್ ಟು ಪೈವ್ ಆಗಿದ್ದು ಜೂನ್ ಅಂತ್ಯದೊಳಗೆ ಪಕ್ಕಾ ಪೋಡು ಮಾಡಿಕೊಡುವುದಾಗಿ ತಹಸೀಲ್ದಾರ್ ಬಸವರಾಜ್ ಭರವಸೆ ನೀಡಿದರು.
ಅಣಬೆ ಬೇಸಾಯ, ಅಡಕೆ ತಟ್ಟೆ ತಯಾರಿಸಿ: ಮೈಸೂರು ಮತ್ತು ಕೊಡಗು ಜಿಲ್ಲೆಗಳು ಪ್ರಸಿದ್ಧ ಪ್ರವಾಸಿ ತಾಣಗಳಾಗಿರುವುದರಿಂದ ಇಲ್ಲಿಗೆ ದೇಶ ವಿದೇಶಗಳಿಂದ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಆದ್ದರಿಂದ ಎರಡು ಜಿಲ್ಲೆಗಳಲ್ಲಿ ಅಣಬೆಗೆ ಉತ್ತಮ ಬೇಡಿಕೆ ಇದೆ. ಪುನರ್ವಸತಿ ಕೇಂದ್ರದಲ್ಲಿ ಅಣಬೆ ಬೇಸಾಯದ ಜತೆಗೆ ಅಡಕೆ ತಟ್ಟೆ ತಯಾರಿಕೆಗೂ ಮುಂದಾದರೆ ಸಂಬಂಧಪಟ್ಟ ಇಲಾಖೆ ವತಿಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
33 ಜನರಿಗೆ ಪುನರ್ವಸತಿ ಕಲ್ಪಿಸಿ: 2013-14ರಲ್ಲಿ ನಾಗರಹೊಳೆ ಅರಣ್ಯದಿಂದ ಹೆಬ್ಬಾಳ ಗಿರಿಜನ ಪುನರ್ವಸತಿ ಕೇಂದ್ರಕ್ಕೆ 130 ಕುಟುಂಬಗಳು ಸ್ಥಳಾಂತರಗೊಂಡಿದ್ದವು. ಆ ವೇಳೆ 18 ವರ್ಷದ 39 ಜನರನ್ನು ಮುಂದಿನ ದಿನಗಳಲ್ಲಿ ಪುನರ್ವಸತಿ ಯೋಜನೆಗೆ ಸೇರ್ಪಡೆಗೊಳಿಸಲಾಗುವುದೆಂಬ ಭರವಸೆಯೊಂದಿಗೆ ನಾವು ಸ್ಥಳಾಂತರಗೊಂಡಿದ್ದೆವು.
2016-17ರಲ್ಲಿ 6 ಜನರನ್ನು ಯೋಜನೆಗೆ ಸೇರಿಸಲಾಗಿದೆ. ಇನ್ನೂ 33 ಜನರು ಬಾಕಿ ಉಳಿದಿದ್ದು, ಅವರನ್ನು ಕೂಡಲೇ ಪುನರ್ವಸತಿ ಯೋಜನೆಗೆ ಸೇರ್ಪಡೆ ಮಾಡಬೇಕೆಂಬ ಮನವಿಗೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಹೇಶ್‌ಕುಮಾರ್, ತಹಸೀಲ್ದಾರ್ ಬಸವರಾಜ್, ಎಸಿಎಫ್ ಪ್ರಸನ್ನಕುಮಾರ್, ಪರಿಶಿಷ್ಟ ವರ್ಗಗಳ ತಾಲೂಕು ಅಧಿಕಾರಿ ಚಂದ್ರಶೇಖರ್, ವಿಸ್ತರಣಾಧಿಕಾರಿ ಶಂಕರ್, ಆರ್‌ಐ ರಾಜ್‌ಕುಮಾರ್, ಲಿಫ್ಟ್ ಸಂಸ್ಥೆಯ ಲೋಕೇಶ್, ಪುನರ್ವಸತಿ ಕೇಂದ್ರದ ಅಧ್ಯಕ್ಷ ಚಂದ್ರು, ಮಾಜಿ ಅಧ್ಯಕ್ಷ ಜೆ.ಟಿ.ರಾಜಪ್ಪ, ಮುಖಂಡರಾದ ಪುಟ್ಟಸ್ವಾಮಿ, ಗವಿಮಾಧು, ಪಿಡಿಒ ಷಡಕ್ಷರಿ ಮತ್ತಿತರರಿದ್ದರು.