ರಾಮನಗರ : ಕೋವಿಡ್ ನಿಯಮಗಳನ್ನು ಮೀರುವ ಅಂಗಡಿ, ಮಾಲ್‌ಗಳು, ಕಲ್ಯಾಣ ಮಂಟಪಗಳನ್ನು ಕರೊನಾ ಮಹಾಮಾರಿ ಹೋಗುವವರೆಗೂ ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಸರ್ಕಾರ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ. ಜನ ಸಂದಣಿ ನಿಯಂತ್ರಣ ಮಾಡುವ ಸಲುವಾಗಿ ಹಲವಾರು ಬಿಗಿ ನಿಯಮಗಳನ್ನು ಹೇರಿದೆ. ಇವುಗಳನ್ನು ಪಾಲಿಸದ ಅಂಗಡಿ ಮುಂಗಟ್ಟು, ಕಲ್ಯಾಣ ಮಂಟಪಗಳು, ಮಾಲ್‌ಗಳನ್ನು ಯಾವುದೇ ಮುಲಾಜಿಗೆ ಒಳಗಾಗದೆ ಬಂದ್ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಸೋಮವಾರದ ಅಂತ್ಯಕ್ಕೆ 567 ಸಕ್ರೀಯ ಪ್ರಕರಣಗಳಿದ್ದು, ಅದೇ ರೀತಿ ಚೇತರಿಕೆ ಪ್ರಮಾಣ ಸಹ ಶೇ.92.54ರಷ್ಟಿದೆ. ಕರೊನಾ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸನ್ನದ್ಧವಾಗಿದೆ. ಇದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಆಕ್ಸಿಜೆನ್ ಸಿಲಿಂಡರ್, ಹಾಸಿಗೆ, ಐಸಿಯೂ ಸೇರಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಾಸ್ಕ್ ಹಾಕದವರಿಗೆ ಹಾಗೂ ಕರೊನಾ ನಿಯಮ ಮೀರಿದವರ ವಿರುದ್ಧ ದಂಡ ಪ್ರಯೋಗ ಮಾಡುವ ಕೆಲಸ ಏ.1ರಿಂದ ಜಾರಿಯಲ್ಲಿದ್ದು, ಏ.18ರವರೆಗೆ 56983 ಪ್ರಕರಣಗಳಲ್ಲಿ ಒಟ್ಟು 5704850 ರೂ ದಂಡ ವಸೂಲಿ ಮಾಡಲಾಗಿದೆ. ಕಳೆದ ಒಂದು ವಾರದಲ್ಲಿಯೇ 5964 ಪ್ರಕರಣ ದಾಖಲು ಮಾಡಿ 596400 ರೂ ದಂಡ ವಸೂಲಿ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಮಾತನಾಡಿ, ಈಗಾಗಲೇ ಜಿಲ್ಲೆಯ ಸಾತನೂರಿನಲ್ಲಿ ಕರೊನಾ ನಿಯಮ ಉಲ್ಲಂಘನೆ ಮಾಡಿದ ಎರಡು ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಇದರ ಜತೆಗೆ ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಕಾರ್ಯ ಚಾಲನೆಯಲ್ಲಿದ್ದು, ಪ್ರಕರಣ ದಾಖಲು ಪ್ರಮಾಣವನ್ನು ಹೆಚ್ಚಿಸುವಂತೆ ಎಲ್ಲ ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಡಿಎಚ್‌ಒ ಡಾ.ನಿರಂಜನ್, ಆರ್‌ಚಿಎಚ್‌ಒ ಡಾ.ಪದ್ಮಾ ಮುಂತಾದವರು ಇದ್ದರು.
ಭಯಪಡದೆ ಲಸಿಕೆ ಹಾಕಿಸಿಕೊಳ್ಳಿ : ಜಿಲ್ಲೆಯಲ್ಲಿ ಲಸಿಕೆ ಪ್ರಮಾಣ ಶೇ.45ರಷ್ಟ ಪೂರ್ಣಗೊಂಡಿದ್ದು, ಉಳಿದವರೂ ಯಾವುದೇ ಭಯ ಪಡದೆ ಲಸಿಕೆ ಹಾಕಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಸೋಂಕಿನ ಲಕ್ಷಣ ಕಂಡು ಬಂದ ತಕ್ಷಣವೇ ಸ್ವಯಂ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು, ಇದರ ಜತೆಗೆ 45 ವರ್ಷ ಮೇಲ್ಪಟ್ಟವರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ.
ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 307959 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು, ಆದರೆ ಈವರೆವಿಗೂ 137971 ಮಂದಿಗೆ ಲಸಿಕೆ ಹಾಕಲಾಗಿದೆ. ಸೋಂಕಿತರನ್ನು ಪತ್ತೆ ಹಚ್ಚುವ ಮತ್ತು ಅವರ ಮೇಲೆ ನಿಗಾ ಇರುವ ಕೆಲಸವನ್ನು ಜಾಗರೂಕತೆಯಿಂದ ಮಾಡಲಾಗುತ್ತಿದ್ದು, ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸುವ ಮೂಲಕ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಇದರ ಜತೆಗೆ ಹೋಂ ಐಸೋಲೇಷನ್ ಗೆ ಅವಕಾಶ ನಿರಾಕರಿಸಲಾಗಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಹೋಂ ಐಸೋಲೇಷನ್ ನೀಡಲು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಶುದ್ಧ ಊಟ, ಸ್ವಚ್ಛತೆಗೆ ಕ್ರಮ :
ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಮಾತನಾಡಿ, ಕೋವಿಡ್ ಆಸ್ಪತ್ರೆಗಳಲ್ಲಿ ಊಟ ಮತ್ತು ಸ್ವಚ್ಛತೆ ಇಲ್ಲ ಎನ್ನುವ ದೂರುಗಳು ಇವೆ, ಇನ್ನೆರಡು ಮೂರು ದಿನಗಳಲ್ಲಿ ಇದು ಕೊನೆ ಆಗಲಿದ್ದು, ಶುದ್ಧ ಊಟ ಮತ್ತು ಸ್ಚಚ್ಛತೆ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಅಲ್ಲದೆ, ಪರಿಸರದಲ್ಲಿ ಕೊಳೆಯುವ ಎಲೆಗಳು ಮತ್ತು ಲೋಟಗಳನ್ನೇ ಊಟಕ್ಕೆ ಬಳಕೆ ಮಾಡಲು ಸಹ ಚಿಂತಿಸಲಾಗುತ್ತಿದೆ. ಜತೆಗೆ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡಲು ಸಹ ಕ್ರಮ ವಹಿಸಲಾಗಿದ್ದು, ಪ್ರತಿ ಎರಡು ಮೂರು ದಿನಗಳಿಗೊಮ್ಮೆ ಪ್ರತಿ ಕೋವಿಡ್ ಕೇರ್ ಕೇಂದ್ರಗಳು ಹಾಗೂ ಆಸ್ಪತ್ರೆಗಳಿಂದ ಸಂಗ್ರಹಿಸಿ ಅವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯಿಂದಲೂ ನಮಗೆ ಸಹಕಾರ ದೊರೆಯುತ್ತಿದ್ದು, ಜಿಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತಿ ಸಿಇಒ ಸಹ ಪ್ರತಿ ದಿನ ಸಭೆಗಳನ್ನು ನಡೆಸುವ ಮೂಲಕ ಪರಿಸ್ಥಿತಿ ಅವಲೋಕಿಸುವ ಮೂಲಕ ಆರೋಗ್ಯ ಇಲಾಖೆ ಕೆಲಸಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ. ಡಾ.ಬಿ.ಎಸ್. ನಿರಂಜನ್ ಜಿಲ್ಲಾ ಆರೋಗ್ಯ ಅಧಿಕಾರಿ, ರಾಮನಗರ
ಬೇರೆ ಇಲಾಖೆಗಳಿಂದಲೂ ಸಿಗಬೇಕಿದೆ ಸಹಕಾರ : ಆರೋಗ್ಯ ಸಿಬ್ಬಂದಿಗೆ ಹೆಚ್ಚಿದ ಒತ್ತಡ
ರಾಮನಗರ : ಕರೊನಾ ಎರಡನೇ ಅಲೆ ದೊಡ್ಡ ಗಂಡಾಂತರವನ್ನೇ ತಂದಿದ್ದು ಇದು ವೈಧ್ಯಕೀಯ ಸಿಬ್ಬಂದಿ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಕರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಒಂದೆಡೆ ಕರೊನಾ ರೋಗಿಗಳನ್ನು ಪತ್ತೆ ಹಚ್ಚುವ ಮತ್ತೊಂದೆಡೆ ಕರೊನಾ ಲಸಿಕೆ ಕಾರ್ಯವೂ ನಡೆಯುತ್ತಿದೆ. ಈ ಎರಡೂ ಕಾರ್ಯಕ್ಕೆ ಇವಕ್ಕೆ ಪೂರಕವಾಗಿ ನೆರವು ನೀಡಬೇಕಾದ ಕಂದಾಯ ಮತ್ತು ಜಿಲ್ಲಾ ಪಂಚಾಯಿತಿ ಇಲಾಖೆ ನೆರವಿಗೆ ನಿಲ್ಲುತ್ತಿಲ್ಲ ಎನ್ನುವ ಆರೋಪವೂ ತಳ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಕೇಳಿ ಬರುತ್ತಿದೆ.
ಟಾರ್ಗೆಟ್ ಭಯ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪತ್ತೆ ಪ್ರಮಾಣ ಹೆಚ್ಚಳ ಮಾಡಬೇಕು ಎನ್ನುವ ಕಾರಣಕ್ಕೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾಸ್ಪತ್ರೆಗೆ ಗುರಿ ನಿಗಧಿ ಪಡಿಸಲಾಗಿದೆ. ಇದರ ಜತೆಗೆ ನಿಗಧಿತ ಗುರಿ ಮುಟ್ಟದೇ ಹೋದರೆ ಅಂತವರ ಹೆಸರನ್ನು ಜಿಲ್ಲಾಧಿಕಾರಿಗೆ ಕಳುಹಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆಯನ್ನು ತಾಲೂಕು ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಹಂತದ ಸಿಬ್ಬಂದಿಗೆ ಹಾಕುತ್ತಿದ್ದಾರೆ. ಆದರೆ ನಿಗಧಿತ ಗುರಿ ಮುಟ್ಟಲು ಜನರು ಸ್ಪಂಧಿಸದೇ ಇರುವುದು ತಳಮಟ್ಟದ ಸಿಬ್ಬಂದಿ ಭಯದಲ್ಲಿಯೇ ಕೆಲಸ ಮಾಡುವಂತೆ ಮಾಡಿದೆ.
ನಿಂದನೆಗೆ ನೊಂದಿದ್ದಾರೆ: ಜಿಲ್ಲೆಯಲ್ಲಿ ಕರೊನಾ ಲಸಿಕೆ ಹಾಕುವ ಅಭಿಯಾನ ಗ್ರಾಮ ಮಟ್ಟಕ್ಕೂ ತಲುಪಿದೆ. ಕೆಲವು ಕಡೆಗಳಲ್ಲಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆಯಾದರೂ ಬಹುತೇಕ ಕಡೆಗಳಲ್ಲಿ ಲಸಿಕೆ ಬಗೆಗಿನ ಭಯ ಇನ್ನೂ ದೂರವಾಗಿಲ್ಲ. ಗ್ರಾಮೀಣ ಭಾಗಕ್ಕೆ ಲಸಿಕೆ ಹಾಕಿಸಿಕೊಳ್ಳಲು ತೆರಳಿದರೆ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರನ್ನು ಬಾಯಿಗೆ ಬಂದಂತೆ ಬೈದು ಕಳುಹಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದು ಸಹ ಸಿಬ್ಬಂದಿ ಕಾರ್ಯಕ್ಕೆ ತಡೆಯೊಡ್ಡಿದೆ.
ನೆರವು ದೊರೆಯುತ್ತಿಲ್ಲ : ಇದರ ನಡುವೆ ಸ್ಥಳೀಯವಾಗಿ ಲಸಿಕೆ ಅಭಿಯಾನ ಮತ್ತು ಸೋಂಕಿತರ ಪತ್ತೆ ಕಾರ್ಯ ಭರದಿಂದ ಸಾಗಿದ್ದರೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಪೂರಕವಾಗಿ ಸ್ಥಳೀಯ ಮಟ್ಟದ ಕಂದಾಯ ಮತ್ತು ಗ್ರಾಪಂ ನಿಂದ ನೆರವು ದೊರೆಯುತ್ತಿಲ್ಲ ಎನ್ನುವ ದೂರುಗಳು ಇವೆ.
ಲಸಿಕೆ ಪಡೆದುಕೊಳ್ಳಲು ಅನುಕೂಲವಾಗುಂತೆ ಗ್ರಾಪಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಅರಿವು ಮೂಡಿಸಿ ಆಸ್ಪತ್ರೆಗೆ ಕಳುಹಿಸಿದರೆ ಅಥವಾ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಲಸಿಕೆ ಪಡೆಯಲು ಪ್ರೋತ್ಸಾಹಿಸಿದರೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಹಕಾರಿ ಆಗುತ್ತಿದೆ. ಆದರೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಿಬ್ಬಂದಿ ಬಿಟ್ಟು ಉಳಿದವರೂ ಇತ್ತ ತಲೆ ಹಾಕುವುದಿಲ್ಲ ಎನ್ನುವ ಆರೋಪವಿದೆ.
ತಳ ಮಟ್ಟದ ಸಿಬ್ಬಂದಿ ಬಳಕೆ : ಕಂದಾಯ ಇಲಾಖೆ ಮತ್ತು ಗ್ರಾಪಂ ನಿಂದ ಅಗತ್ಯ ನೆರವು ದೊರಕಿಸಿ ಕೊಡುವ ಸಂಬಂಧ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಪ್ರತಿ ದಿನ ಸಭೆಗಳನ್ನು ನಡೆಸುವ ಮೂಲಕ ತಳ ಮಟ್ಟದ ಸಿಬ್ಬಂದಿಯನ್ನು ಕರೊನಾ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎನ್ನುವುದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ವಾದ. ಮೊದಲು ಈ ಕೆಲಸ ಆಗುತ್ತಿರಲಿಲ್ಲ, ಆದರೆ ಜಿಲ್ಲಾಧಿಕಾರಿ ಮತ್ತು ಸಿಇಒ ಈ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರುವ ಕಾರಣದಿಂದಾಗಿ, ಈಗ ಸಮಸ್ಯೆ ಇಲ್ಲ ಎನ್ನುತ್ತಾರೆ ಡಿಎಚ್‌ಒ ಡಾ.ಬಿ.ಎಸ್.ನಿರಂಜನ್.
ನಮಗೆ ಟಾರ್ಗೆಟ್ ನೀಡಲಾಗಿದೆ. ಪಿಪಿಇ ಕಿಟ್ ಧರಿಸಿಕೊಂಡು ಟಾರ್ಗೆಟ್ ರೀಚ್ ಮಾಡುವುದು ಕಷ್ಟದ ಕೆಲಸ. ಲಸಿಕೆ ಹಾಕಲು ಹೋದರೆ ಜನ ಬಾಯಿಗೆ ಬಂದಂತೆ ಬೈಯುತ್ತಾರೆ. ಕಂದಾಯ ಮತ್ತು ಗ್ರಾಪಂ ಸಿಬ್ಬಂದಿ ನಮ್ಮ ನೆರವಿಗೆ ಬಂದರೆ ಕೆಲಸವನ್ನು ಆತಂಕವಿಲ್ಲದೆ ಮಾಡಬಹುದು. ಹೆಸರು ಹೇಳಲಿಚ್ಛಿಸದ ಲ್ಯಾಬ್ ಟೆಕ್ನಿಷಿಯನ್, ರಾಮನಗರ