ಕೋಲಾರ ತಹಸೀಲ್ದಾರ್​ ಕಚೇರಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಬುಧವಾರ ದಿಢೀರ್​ ಭೇಟಿ ನೀಡಿದಾಗ ಸಾರ್ವಜನಿಕರು ಅಹವಾಲು ಸಲ್ಲಿಸಿದರು. 
ನ್ಯೂಸ್

ತಾಲೂಕು ಕಚೇರಿಗೆ ಡಿಸಿ ದಿಢೀರ್​ ಭೇಟಿ

ಕೋಲಾರ: ನಗರದ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಎಂ.ಆರ್​.ರವಿ ದಿಢೀರ್​ ಭೇಟಿ ನೀಡಿ ಮೂಲ ಸೌಲಭ್ಯಗಳ ಕುರಿತು ಪರಿಶೀಲಿಸಿ, ಕುಡಿಯುವ ನೀರು, ಕುರ್ಚಿಗಳ ವ್ಯವಸ್ಥೆ, ಸಾರ್ವಜನಿಕರಿಗೆ ಮಾಹಿತಿ ನೀಡುವ ಕೊಠಡಿ, ಶೌಚಗೃಹ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ನಗರಸಭೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡು ತಹಸೀಲ್ದಾರ್​ ಕಚೇರಿಗೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ಶೌಚಗೃಹಗಳು ಹಾಳಾಗಿದ್ದು, ರಿಪೇರಿ ಮಾಡಲು ಯೋಗ್ಯವಾಗಿಲ್ಲ. ಹಾಗಾಗಿ ಹೊಸದಾಗಿ ಶೌಚಗೃಹಗಳನ್ನು ನಿರ್ಮಿಸಬೇಕು. ಈ ಸಂಬಂಧ ಅಂದಾಜುಪಟ್ಟಿ ತಯಾರಿಸಿ ಪ್ರಸ್ತಾವ ಸಲ್ಲಿಸಬೇಕು ಎಂದು ಸೂಚಿಸಿದರು.

ಇನ್ನು ಡಿಸಿ ಆಗಮಿಸಿದ ಸಂದರ್ಭದಲ್ಲಿ ಕಾರಿಡಾರ್​ನಲ್ಲಿ ನಿಂತಿದ್ದ ಕೆಲ ವ್ಯಕ್ತಿಗಳು ಪೌತಿ ಖಾತೆ, ಖಾತೆ ಬದಲಾವಣೆ, ಜಮೀನು ಸಂಬಂಧ ದಾಖಲೆ ನೀಡಲು ಸಿಬ್ಬಂದಿ ವಿಳಂಬ ಮಾಡುತ್ತಿರುವುದು, ಸಿಬ್ಬಂದಿ ಸಕಾಲಕ್ಕೆ ಕಚೇರಿಗೆ ಆಗಮಿಸದೆ ಇರುವ ಬಗ್ಗೆ ಡಿಸಿ ಗಮನಕ್ಕೆ ತಂದರು. ಸಾರ್ವಜನಿಕರಿಗೆ ಅಹವಾಲಿಗೆ ಸ್ಪಂದಿಸಿದ ಡಿಸಿ, ದಾಖಲೆಗಳನ್ನು ಪರಿಶೀಲಿಸಿ ಅಧಿಕಾರಿ, ಸಿಬ್ಬಂದಿ ವಿರುದ್ಧ ದೂರು ನೀಡುವ ಮುಂಚೆ ಅರ್ಥ ಮಾಡಿಕೊಳ್ಳಬೇಕು. ಕೆಲಸ ಆಗಬೇಕು ಎಂದು ಕೇವಲ ಅರ್ಜಿ ಸಲ್ಲಿಸಿದರೆ ಆಗದು, ಪೌತಿ ಖಾತೆಗೆ ಬೇಕಾಗಿರುವ ಪೂರಕ ದಾಖಲೆಗಳನ್ನೂ ಸಲ್ಲಿಸಬೇಕು. ಆಗ ಅದನ್ನು ಪರಿಶೀಲಿಸಿ, ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿ ಕ್ರಮವಹಿಸುತ್ತಾರೆ ಎಂದು ಹೇಳಿದರು.

ಸತ್ತವರ ಹೆಸರಿಗೆ ಖಾತೆ ಮಾಡಲು ಅವಕಾಶವಿಲ್ಲ, ಒಂದು ವೇಳೆ ಮಾಡಿದರೆ ನೀವೆ ಮಾಧ್ಯಮಗಳ ಬಳಿಗೆ ಹೋಗಿ ಸತ್ತವರ ಹೆಸರಿಗೆ ಖಾತೆ ಮಾಡಿದ ಅಧಿಕಾರಿಗಳು ಅಂತ ದೂಷಣೆ ಮಾಡುತ್ತೀರಿ. ಕಾನೂನು ಪ್ರಕಾರ ಸಲ್ಲಿಸಬೇಕಾಗಿರುವ ದಾಖಲೆ ಸಲ್ಲಿಸಿದರೆ, ಯಾವ ವಿಳಂಬ ಮಾಡುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಡಿಸಿ ಸಲಹೆ ನೀಡಿದರು. ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ, ಆಧುನಿಕ ಕಾಲದಲ್ಲೂ ಸಾರ್ವಜನಿಕರು ಹೆಚ್ಚಾಗಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಸಮಸ್ಯೆಗಳನ್ನು ಸಕಾಲಕ್ಕೆ ಬಗೆಹರಿಸಲು ಅಧಿಕಾರಿ, ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.

ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಮಿನಿ ವಿಧಾನ ಸೌಧ ಕಟ್ಟಡಕ್ಕೆ ಸ್ಥಳಾಂತರ ಆದ ನಂತರ ಇಲ್ಲಿಗೆ ಸಾರ್ವಜನಿಕರು ಆಗಮಿಸುವುದು ಹೆಚ್ಚಾಗಿದೆ. ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಯಿಲ್ಲ. ಇರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಿ ಕಚೇರಿಗೆ ಆಗಮಿಸಿದವರನ್ನು ಕಾಯಿಸದೆ ಒಂದು ಕಾಲ ಮಿತಿಯೊಳಗೆ ಕೆಲಸ ಮಾಡಿ ಕೊಡಲು ಸೂಚಿಸಲಾಗಿದೆ ಎಂದು ಹೇಳಿದರು.

ತಹಸೀಲ್ದಾರ್​ ಡಾ.ನಯನಾ, ಉಪತಹಸೀಲ್ದಾರ್​ ಮರಿಯಾ, ಕಂದಾಯ ನಿರೀಕ್ಷಕ ರಾಜೇಂದ್ರ ಮತ್ತಿತರರು ಹಾಜರಿದ್ದರು.