ಮಂಡ್ಯ: ಚುನಾವಣೆ ಹಿನ್ನೆಲೆಯಲ್ಲಿ ಹಣ, ಮದ್ಯ ಹಂಚಿಕೆ ತಡೆಯುವ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಮೂವರಂತೆ ಫ್ಲೈಯಿಂಗ್ ಸ್ಕ್ಟಾಡ್ ನಿಯೋಜಿಸಲಾಗಿದೆ. ಈ ತಂಡ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ರವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.29ರಿಂದ ಮೇ 8ರವರೆಗೆ ಜಿಲ್ಲೆಯಲ್ಲಿ 3,48,48,253 ರೂ. ಹಣ, 2,35,21,991 ರೂ. ಮೌಲ್ಯದ ಮದ್ಯ, 55,550 ರೂ. ಮೌಲ್ಯದ 1,805 ಕೆಜಿ ಡ್ರಗ್ಸ್, 24,79,270 ರೂ. 22,557 ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಆರಕ್ಷಕ ಇಲಾಖೆಯಿಂದ 19 ಪ್ರಕರಣ, ಅಬಕಾರಿ ಇಲಾಖೆಯಿಂದ 1322 ಪ್ರಕರಣ ದಾಖಲಿಸಿ ಈ ಪೈಕಿ 128 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರ್‌ಟಿಒ ಅಧಿಕಾರಿಗಳು 506 ಪ್ರಕರಣಗಳನ್ನು ದಾಖಲಿಸಿ 16,50,696 ರೂ. ದಂಡ ವಿಧಿಸಿದ್ದಾರೆ. ಚುನಾವಣಾಧಿಕಾರಿ ತಂಡದಿಂದ 4 ಪ್ರಕರಣ ದಾಖಲಿಸಲಾಗಿದೆ ಎಂದರು.
ಮತದಾನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಮೇ 9ರಂದು ಮಳವಳ್ಳಿ ಪಟ್ಟಣದ ಶಾಂತಿ ಪದವಿ ಪೂರ್ವ ಕಾಲೇಜು, ಮದ್ದೂರಿನಲ್ಲಿ ಎಚ್.ಕೆ. ವೀರಣ್ಣಗೌಡ ಪಪೂ ಕಾಲೇಜು, ಮೇಲುಕೋಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಿಎಸ್‌ಎಸ್‌ಕೆ ಪ್ರೌಢಶಾಲೆ, ಮಂಡ್ಯದಲ್ಲಿ ವಿಶ್ವವಿದ್ಯಾಲಯ, ಶ್ರೀರಂಗಪಟ್ಟಣದಲ್ಲಿ ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜು, ನಾಗಮಂಗಲ ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜು ಹಾಗೂ ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಸ್ಟರಿಂಗ್ ನಡೆಯಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತದಾನ ಮುಕ್ತಾಯಕ್ಕೆ 48 ಗಂಟೆ ಅವಧಿಯಲ್ಲಿ ಅಂದರೆ 8ರಂದು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಬದಲಿಗೆ ಐವರು ಮಾತ್ರ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಬಹುದು. ಅದಕ್ಕೂ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದು ಒಂದು ವಾಹನ ಹಾಗೂ ಚಾಲಕ ಸೇರಿದಂತೆ ಐವರು ತೆರಳಬಹುದು ಎಂದು ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್ ಮಾತನಾಡಿ, ಚುನಾವಣೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 1350 ರೌಡಿಶೀಟರ್‌ಗಳಿಗೆ ಸೂಚನೆ ಕೊಟ್ಟು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಅಂತೆಯೇ 21 ಜನರನ್ನು ಗಡಿಪಾರು ಮಾಡಲಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡಿ ಶಾಂತಿ, ಸುವ್ಯವಸ್ಥೆಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಬಕಾರಿ ಜಿಲ್ಲಾ ಅಧಿಕಾರಿ ಮಹಾದೇವಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್. ನಿರ್ಮಲಾ ಇದ್ದರು.