ಮೂಡಿಗೆರೆ: ಸಮಾಜಮುಖಿ ಚಿಂತನೆಯ ಉಳ್ಳಾಲ ದಯಾನಂದ ನಾಯಕ್ ಅವರು ಆರ್‌ಎಸ್‌ಎಸ್ ಸಿದ್ಧಾಂತ ಮೈಗೂಡಿಸಿಕೊಂಡು ಎಲ್ಲ ಧರ್ಮಿಯರನ್ನು ಸಮಾನ ಗೌರವದಿಂದ ಕಾಣುತ್ತಿದ್ದರು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಹೇಳಿದರು.
ಜೆಸಿಐ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ದಿ.ಉಳ್ಳಾಲ ದಯಾನಂದ ನಾಯಕ್ ಅವರ ಜನ್ಮ ಶತಾಬ್ದಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್‌ಎಸ್‌ಎಸ್ ಸಂಘಟನೆಗಾಗಿ ಅವಿರತವಾಗಿ ದುಡಿದರೂ ಕೂಡ ರಾಜಕೀಯ ಕ್ಷೇತ್ರದತ್ತ ಧುಮುಕಲಿಲ್ಲ. ಅಧಿಕಾರಕ್ಕಾಗಿ ಎಂದಿಗೂ ಅಸೆಪಟ್ಟವರಲ್ಲ. ರಾಷ್ಟ್ರೀಯ ನಾಯಕರ ನಿಕಟ ಸಂಪರ್ಕ ಹೊಂದಿದ್ದರೂ ತನಗಾಗಿ ಬಳಸಿಕೊಳ್ಳದೆ ಸಮಾಜದ ಒಳಿತಿಗಾಗಿ ಬಳಸಿಕೊಂಡಿದ್ದರು ಎಂದು ತಿಳಿಸಿದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ, ವ್ಯಾಪಾರಕ್ಕಾಗಿ ಮಂಗಳೂರಿನ ಉಳ್ಳಾಲದಿಂದ ಮಲೆನಾಡಿನ ಮೂಡಿಗೆರೆಗೆ ಬಂದಿದ್ದ ಅವರು ತನ್ನ ಜೀವನಕ್ಕಾಗಿ ಮಾತ್ರ ಅವರು ಗಳಿಸಿದ್ದನ್ನು ಬಳಸಿಕೊಂಡು ಉಳಿದೆಲ್ಲವನ್ನು ಸಮಾಜಕ್ಕೆ ದಾನ ಮಾಡಿದ್ದಾರೆ. ಯುವಕರಲ್ಲಿ ದೇಶಾಭಿಮಾನ ಹುಟ್ಟುಹಾಕುವ ಕೆಲಸ ಮಾಡಿದ್ದಾರೆ. ಉನ್ನತ ಮಟ್ಟದ ಚಿಂತನೆ ಮೈಗೂಡಿಸಿಕೊಂಡು ಅದನ್ನು ಎಲ್ಲರೊಂದಿಗೂ ಹಂಚಿಕೊಂಡಿದ್ದರು. ಸ್ವಾರ್ಥಕ್ಕಾಗಿ ರಾಜಕಾರಣ ಮಾಡಬಾರದು. ನಿಸ್ವಾರ್ಥ ಸೇವೆಗಾಗಿ ಬದುಕೋಣ ಎಂದು ತೋರಿಸಿಕೊಟ್ಟ ದಯಾನಂದ ನಾಯಕ್ ಆದರ್ಶ ಎಲ್ಲರಿಗೂ ಮಾದರಿ ಎಂದರು.
ದಿ. ದಯಾನಂದ ನಾಯಕ್ ಅವರ ಪತ್ನಿ ಸುಮತಿ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಸೀತಾರಾಮ್ ಕೇದಿಲಾಯ, ಕಾಸ ನಿರ್ಮಲ್ ಕುಮಾರ್, ಎಂ.ಅರ್.ಜಗದೀಶ್, ಎನ್.ಎಲ್.ಸುಂದರೇಶ್ವರ್, ಎಂ.ಜಿ.ದಿನೇಶ್, ಕೆ.ಆರ್.ಕೇಶವ, ಚಿಪ್ರಗುತ್ತಿ ಪ್ರಶಾಂತ್, ದೀಪಕ್ ದೊಡ್ಡಯ್ಯ, ಬಿ.ಎಸ್.ಜಯರಾಂ, ಎಚ್.ಜಿ. ಸುರೇಂದ್ರ, ಸುಂದರೇಶ್, ಜಗದೀಪ್, ಸುರೇಶ್ ಇತರರಿದ್ದರು.