ನ್ಯೂಸ್

ಎರಡನೇ ಮದುವೆಯಾದ ಭೂಗತ ಪಾತಕಿ; ದಾವೂದ್​ ಇಬ್ರಾಹಿಂ ಬಗ್ಗೆ ಸೋದರಳಿಯ ಹೇಳಿದ ಮಾಹಿತಿ ಇಲ್ಲಿದೆ…

ಕರಾಚಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಎರಡನೇ ಮದುವೆ ಆಗಿದ್ದಾನೆ ಎಂಬ ಸ್ಫೋಟಕ ವಿಚಾರವನ್ನು ರಾಷ್ಟ್ರೀಯ ತನಿಖಾ ದಳ ಬಹಿರಂಗ ಪಡಿಸಿದೆ. ವಿಚಾರಣೆಯ ವೇಳೆ ದಾವೂದ್ ಸೋದರಳಿಯ ಮಾಹಿತಿ ಖಚಿತಪಡಿಸಿದ್ದಾನೆ ಎಂದು ವರದಿಯಾಗಿದೆ. ಎನ್​ಐಎ ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ, ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ವಾಸವಿದ್ದಾನೆ. ಜತೆಗೆ ಎರಡನೇ ವಿವಾಹವಾದರೂ ಮೊದಲ ಪತ್ನಿ ಮೆಹಜಬೀನ್ ಶೇಖ್‌ಗೆ ವಿಚ್ಛೇದನ ನೀಡಲ್ಲ ಎಂಬುದು ಬಹಿರಂಗವಾಗಿದೆ.

ಕಳೆದ ಜುಲೈ ತಿಂಗಳಿನಲ್ಲಿ ದಾವೂದ್​ನ ಮೊದಲ ಪತ್ನಿಯನ್ನು ಸೋದರಳಿಯ ಅಲಿ ಶಾ ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದಾನೆ. ಈ ವೇಳೆ ದಾವೂದ್ ಎರಡನೇ ವಿವಾಹವಾಗಿರುವ ವಿಚಾರವನ್ನು ಮೆಹಜಬೀನ್ ಶೇಖ್‌ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ.

ಇತ್ತೀಚೆಗೆ ಮುಂಬೈ ಸೇರಿದಂತೆ ಸೇರಿದ ಹಲವೆಡೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳ, ಹಲವರನ್ನು ಬಂಧಿಸಿ ದಾವೂದ್ ಇಬ್ರಾಹಿಂನ ಭಯೋತ್ಪಾದಕ ಜಾಲವನ್ನು ಬಹಿರಂಗಪಡಿಸಿತ್ತು. ನಂತರ ಎನ್​ಐಎ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು.

ದಾವೂದ್ ಸೋದರಳಿಯ ಎನ್​ಐಎಗೆ ತಿಳಿಸಿರುವ ಮಾಹಿತಿ ಪ್ರಕಾರ, ಭಾರತದಲ್ಲಿರುವ ದಾವೂದ್​​ ಸಂಬಂಧಿಕರೊಂದಿಗೆ ಮೊದಲ ಪತ್ನಿ ​ವಾಟ್ಸಾಪ್ ಕರೆಗಳ ಮೂಲಕ ಸಂಪರ್ಕ ಸಾಧಿಸುತ್ತಾಳೆ ಎಂದಿದ್ದಾನೆ. ಆದರೆ ದಾವೂದ್​ನ ಎರಡನೇ ಹೆಂಡತಿ ಯಾರು? ಎಲ್ಲಿ ವಾಸಿಸುತ್ತಿದ್ದಾಳೆ ಮತ್ತು ದಾವೂದ್‌ನೊಂದಿಗೆ ಯಾವಾಗ ಮದುವೆಯಾಗಿದ್ದಾಳೆ ಎಂಬ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. (ಏಜೆನ್ಸೀಸ್)