ದಾವಣಗೆರೆ: ಉರ್ದು ಶಾಲೆಯ ಶಿಕ್ಷಕನ ವಿರುದ್ಧ ಕೋಮು ಗಲಭೆಗೆ ಪ್ರಚೋದನೆ ಹಾಗೂ ಸಹಶಿಕ್ಷಕಿಯರಿಗೆ ಲೈಂಗಿಕ ದೌರ್ಜನ್ಯ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.
ಚನ್ನಗಿರಿ ತಾಲೂಕಿನ ದೊಡ್ಡಗಟ್ಟಿ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಕನ್ನಡ ಭಾಷೆಯ ಶಿಕ್ಷಕ ಆಜ್ಗರಲಿ ಖಾನ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಈತನ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಎಸ್ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿಕ್ಷಕ ಆಜ್ಗರಲಿ ಖಾನ್ ಪಾಠ ಮಾಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ. ಸಹ ಶಿಕ್ಷಕಿಯರ ಮೈ-ಕೈ ಮುಟ್ಟಿ ಅಸಭ್ಯ ವರ್ತನೆ ಮಾಡುತ್ತಾರೆ ಎಂದು ದೂರಲಾಗಿದೆ. ಶಿಕ್ಷಕನ ಉಪಟಳದಿಂದ ಬೇಸತ್ತು ಈಗಾಗಲೇ ಕೆಲ ಸಹ ಶಿಕ್ಷಕಿಯರು ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರಂತೆ. ಈತನ ದುರ್ವರ್ತನೆ ಸಹಿಸಲಾದೇ ವರ್ಗಾವಣೆ ಮಾಡುವಂತೆ ಪ್ರಸ್ತುತ ಶಾಲೆಯ ಮುಖ್ಯ ಶಿಕ್ಷಕಿ ಅಂಗಲಾಚುತ್ತಿದ್ದಾರಂತೆ.
ಗ್ರಾಮದ ಹಿರಿಯರು ಸುಮಾರು ಐದಾರು ವರ್ಷಗಳಿಂದ ಶಿಕ್ಷಕನಿಗೆ ನಿರಂತರವಾಗಿ ಬುದ್ಧಿ ಹೇಳುತ್ತಾ ಬಂದಿದ್ದಾರೆ. ಆದರೆ, ಗ್ರಾಮದ ಹಿರಿಯರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲವಂತೆ. ಅಲ್ಲದೆ, ಶಾಲೆಯ ಬಗ್ಗೆ ಯಾರಾದರೂ ಮಾಹಿತಿ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಗ್ರಾಮಸ್ಥರು ಬೇಸರ ಹೊರಹಾಕಿದ್ದಾರೆ.
ಇದೀಗ ಶಿಕ್ಷಕನ ಉದ್ಧಟತನ ಎಲ್ಲೆ ಮೀರಿದ್ದು, ರೊಚ್ಚಿಗೆದ್ದಿರುವ ಗ್ರಾಮಸ್ಥರು ತಪ್ಪಿತಸ್ಥ ಶಿಕ್ಷಕ ಆಜ್ಗರಲಿ ಖಾನ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್)