ನ್ಯೂಸ್

ಸರ್ಕಾರದ ಇಲಾಖೆಗಳಲ್ಲಿ ಕೈಮಗ್ಗ ಉತ್ಪನ್ನ ಬಳಕೆ

Chitradurga

ದಾವಣಗೆರೆ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೈಮಗ್ಗದಿಂದ ತಯಾರಿಸಿದ ಬಟ್ಟೆಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹ ನೀಡಲು ಚಿಂತನೆ ನಡೆಸಬೇಕು ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಸಲಹೆ ನೀಡಿದರು.

ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಬುಧವಾರ, ಕೈಮಗ್ಗ ಮತ್ತು ಜವಳಿ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ದೀಪಾವಳಿ ಪ್ರಯುಕ್ತ ಆಯೋಜಿಸಿರುವ ‘ವಸ್ತ್ರಾಂಬರ’ ವಿಶೇಷ ಕೈಮಗ್ಗ ಮೇಳ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ನೌಕರರಿಗೆ ಕೈಮಗ್ಗದಿಂದ ತಯಾರಾದ ಸಮವಸ್ತ್ರವನ್ನು ಕೊಡಬೇಕು. ಇದರಿಂದ ಸಂಕಷ್ಟದಲ್ಲಿರುವ ನೇಕಾರರ ಬದುಕಿಗೆ ಒಂದಿಷ್ಟು ಅಸರೆಯಾಗಲಿದೆ ಎಂದರು.

ನೇಕಾರರು ಎಲ್ಲರಿಗೂ ಬಟ್ಟೆ ಕೊಟ್ಟು, ಹೊಟ್ಟೆ ತುಂಬಾ ಊಟ ಮಾಡದ ಪರಿಸ್ಥಿತಿಯಲ್ಲಿದ್ದಾರೆ. ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು ನೇಕಾರರ ಬದುಕಿನ ಮೇಲೆ ಬೆಳಕು ಚೆಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೈಮಗ್ಗದ ಬಟ್ಟೆಗಳನ್ನು ಖರೀದಿ ಮಾಡುವತ್ತ ಒಂದು ಹೆಜ್ಜೆ ಮುಂದೆ ಹೋಗಬೇಕಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮೇಳ ನಡೆಯುವುದು ಕಡಿಮೆ. ಅದರಲ್ಲೂ ಕೈಮಗ್ಗದಂಥ ಬಟ್ಟೆಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಈ ಮೇಳ ನಡೆಸುತ್ತಿರುವುದು ಸಂತೋಷದ ಸಂಗತಿ. ಜನರು ಸಹ ಇದಕ್ಕೆ ಸಹಕಾರ ನೀಡಬೇಕು. ಕೈಮಗ್ಗದ ಬಟ್ಟೆಗಳನ್ನು ಖರೀದಿ ಮಾಡುವ ಮೂಲಕ ನೇಕಾರರ ನೆರವಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಜಿ.ಪಿ.ಶ್ರೀನಿವಾಸ ಮೂರ್ತಿ ಮಾತನಾಡಿ, ಕೇಂದ್ರ ಸರ್ಕಾರ ನೇಕಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

ಪ್ರತಿ ಜಿಲ್ಲೆಗಳಲ್ಲಿ ನೇಕಾರರಿಗೆ ಅನುಕೂಲ ಆಗಲೆಂದು ಈ ಮೇಳಗಳನ್ನು ಆಯೋಜನೆ ಮಾಡುವಂತೆ ಸೂಚಿಸಿದೆ. ಅದರಂತೆ ರಾಜ್ಯದಲ್ಲಿ 12 ಜಿಲ್ಲೆಗಳಲ್ಲಿ ಮೇಳ ನಡೆಯಲಿದೆ. ಅದರಲ್ಲಿ ಮೊದಲಿಗೆ ಐದು ಜಿಲ್ಲೆಗಳು ಆಯ್ಕೆಯಾಗಿದ್ದು, ದಾವಣಗೆರೆಯೂ ಒಂದಾಗಿದೆ. ಮೇಳದಲ್ಲಿ ಶೇ.20ರಷ್ಟು ರಿಯಾಯಿತಿ ನೀಡಲಾಗಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಸುರೇಶ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿದೇರ್ಶಕ ಡಿ.ಕೆ.ಲಿಂಗರಾಜು ಮಾತನಾಡಿದರು. ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಸುರೇಶ್ ಎನ್.ತಡಹಕನಹಳ್ಳಿ, ಉಪ ನಿರ್ದೇಶಕಿ ವೈ.ಬಿಂದು ಇದ್ದರು. ಭಾರತ ಸರ್ಕಾರದ ಜವಳಿ ಮಂತ್ರಾಲಯ, ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್‌ಲೂಮ್ಸ್), ಕೈಮಗ್ಗ ಮತ್ತು ಜವಳಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರದಿಂದ 14 ದಿನಗಳ ಕಾಲ ಈ ಮೇಳ ನಡೆಯಲಿದೆ.