ದಾವಣಗೆರೆ : ಎಸ್‌ಎಫ್‌ಸಿ ವಿಶೇಷ ಅನುದಾನ, ಒಳಚರಂಡಿ ಹಾಗೂ ಎಸ್‌ಟಿಪಿ ಘಟಕ, ಕಸಾಯಿ ಖಾನೆ ನಿರ್ಮಾಣ ಹಾಗೂ ಎಲ್‌ಇಡಿ ಬೀದಿದೀಪ ಖರೀದಿಸಲು ಅನುದಾನ ಬಿಡುಗಡೆಗೆ ಕೂಡಲೇ ಆದೇಶ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ಮಹಾನಗರ ಪಾಲಿಕೆ ಮಹಾಪೌರ ಕೆ. ಚಮನ್‌ಸಾಬ್ ಹೇಳಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಮುಖಂಡರು ಮಂಗಳವಾರ ಬೆಂಗಳೂರಿಗೆ ನಿಯೋಗ ತೆರಳಿ ಮುಖ್ಯಮಂತ್ರಿ ಭೇಟಿಯಾಗಿ ಮೂಲಸೌಕರ್ಯ ಹಾಗೂ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೆ ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2023-24ನೇ ಸಾಲಿನ ಎಸ್‌ಎಸ್‌ಪಿ ವಿಶೇಷ ಅನುದಾನದಡಿ ಮಂಜೂರಾದ 32.46 ಕೋಟಿ ರೂ. ತುರ್ತು ಬಿಡುಗಡೆ, ಒಳಚರಂಡಿ ವಲಯ-2ರ ಒಳಚರಂಡಿ ಹಾಗೂ ಎಸ್‌ಟಿಪಿ ಘಟಕ ನಿರ್ಮಾಣ ಕಾಮಗಾರಿಗೆ 142 ಕೋಟಿ ರೂ., ಅತ್ಯಾಧುನಿಕ ಕಸಾಯಿ ಖಾನೆ ನಿರ್ಮಾಣಕ್ಕೆ 22 ಕೋಟಿ ರೂ. ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಎಲ್‌ಇಡಿ ಬೀದಿ ದೀಪಗಳ ಅಳವಡಿಸಲು 8 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ನಗರದಲ್ಲಿ ಅಂದಾಜು 6 ಲಕ್ಷ ಜನಸಂಖ್ಯೆಯಿದ್ದು, ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇರುವುದರಿಂದ 440 ಪೌರ ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಸಿಎಂ ಕೂಡಲೇ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು. ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಪಿ.ಬಿ. ರಸ್ತೆ ಗೋಶಾಲೆಯಿಂದ ಬೇತೂರು ರಸ್ತೆವರೆಗೆ 6 ಕಿಮೀ ರಿಂಗ್ ರಸ್ತೆಗೆ 120 ಕೋಟಿ ರೂ. ಹಾಗೂ ಹೊರವಲಯದ ಬಡಾವಣೆಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಿಸಲು 200 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸಲ್ಲಿಸಿರುವ ಪ್ರಸ್ತಾವನೆಗೆ ಸಚಿವರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಬೆಂಗಳೂರಿನ ಮುಖ್ಯಮಂತ್ರಿ ಮನೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಅವರು ಸುಮಾರು 2 ಗಂಟೆಗಳ ಕಾಲ ನಗರದ ಸಮಸ್ಯೆಗಳ ಬಗ್ಗೆ ಸಿಎಂ ಗಮನ ಸೆಳೆದು ಮನವರಿಕೆ ಮಾಡಿಕೊಟ್ಟಿದ್ದು, ಸಚಿವರು ಹಾಗೂ ಸಿಎಂಗೆ ಧನ್ಯವಾದ ಸಲ್ಲಿಸಿದರು. ಪಾಲಿಕೆ ಸದಸ್ಯ ಎ. ನಾಗರಾಜ್ ಮಾತನಾಡಿ, ನಗರದ ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿ ಭೇಟಿ ಕಾರ್ಯ ಫಲಪ್ರದ ಆಗಿದೆ. ಆದ್ಯತೆ ಮೇರೆಗೆ ಎಲ್ಲ ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಕೆಲವು ಕಾಮಗಾರಿ ಬಜೆಟ್‌ನಲ್ಲಿ ತೆಗೆದುಕೊಳ್ಳಲು ಒತ್ತಾಯಿಸಲಾಗಿದೆ ಎಂದರು. ಉಪ ಮೇಯರ್ ಸೋಗಿ ಶಾಂತ್‌ಕುಮಾರ್, ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಎಲ್.ಡಿ. ಗೋಣೆಪ್ಪ, ಮುಖಂಡ ಉಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.