ನ್ಯೂಸ್

ಚಿಕ್ಕ ವಯಸ್ಸಿನಲ್ಲೇ ವಿಧವೆಯಾದ ಮಗಳು, ನಿನ್ನ ಆ ಸ್ಥಿತಿಯಲ್ಲಿ ನೋಡಲಾಗಲ್ಲ ಎಂದು ವಿಷ ಸೇವಿಸಿ ತಂದೆ ಆತ್ಮಹತ್ಯೆ| Suicide

ಅನಂತಪುರ: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ನಲ್ಲಮಾಡ ಮಂಡಲದ ಎನ್​. ಎನುಮುಲವರಿಪಲ್ಲಿ ಗ್ರಾಮದಲ್ಲಿ ತಂದೆಯೊಬ್ಬರು ಮಗಳು ಚಿಕ್ಕ ವಯಸ್ಸಿನಲ್ಲಿ ವಿಧವೆಯಾದಳು ಎಂದು ಮಾನಸಿಕವಾಗಿ ನೊಂದು ಮಂಗಳವಾರ(ಅ. 21) ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಎನ್. ಎನುಮುಲವರಿಪಲ್ಲಿ ಗ್ರಾಮದ ಚಿಲ್ಲ ಚಿನ್ನಗಂಗಪ್ಪ (54) ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು. ಮೃತರ ಅಳಿಯ ಭಾಸ್ಕರ್ ಆರು ತಿಂಗಳ ಹಿಂದೆ ನಿಧನರಾಗಿದ್ದರು. ತಮ್ಮ ಮಗಳು ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾದ ಕಾರಣ ಅವರು ದುಃಖಿತರಾಗಿದ್ದು, ತೀವ್ರ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಅವರು ತಮ್ಮ ಜಮೀನಿಗೆ ಹೋಗಿ ಕೀಟನಾಶಕ ಸೇವಿಸಿದ್ದಾರೆ ಎನ್ನಲಾಗಿದೆ.

ತಕ್ಷಣ ಸಂಬಂಧಿಕರು ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿ ನಲ್ಲಮಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಪ್ರಾಥಮಿಕ ಚಿಕಿತ್ಸೆಯ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅನಂತಪುರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರನ್ನು ಪರೀಕ್ಷಿಸಿ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು.

ಮೃತರ ಸಂಬಂಧಿಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಮೃತರು ಪತ್ನಿ ಕಲಾವತಿ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. (ಏಜೆನ್ಸೀಸ್)