ನ್ಯೂಸ್

ಮಧ್ಯಪ್ರದೇಶ ಕಾಂಗ್ರೆಸ್​ ರೆಬಲ್​ ಶಾಸಕನ ಪುತ್ರಿಯ ಮೃತದೇಹ ರಾಜಸ್ಥಾನದಲ್ಲಿ ಪತ್ತೆ; ಸಾವಿನ ಸುತ್ತ ಅನುಮಾನ...!

ಜೈಪುರ: ಮಧ್ಯಪ್ರದೇಶ ಕಾಂಗ್ರೆಸ್​ನ ರೆಬಲ್​ ಶಾಸಕರೋರ್ವರ ಮಗಳ ಮೃತದೇಹ ರಾಜಸ್ಥಾನದ ಬರನ್​ ಜಿಲ್ಲೆಯಲ್ಲಿ ಪತ್ತೆಯಾಗಿದೆ.

ಈ ಸಾವಿಗೆ ಆಕೆಯ ಪತಿ ಮತ್ತು ಅವನ ಕುಟುಂಬದವರೇ ಕಾರಣ ಎಂದು ಶಾಸಕರ ಮನೆಯವರು ಆರೋಪ ಮಾಡುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಧ್ಯಪ್ರದೇಶ ಕಾಂಗ್ರೆಸ್​ನಿಂದ ರೆಬಲ್​ ಆಗಿರುವ ಶಾಸಕ ಸುರೇಶ್​ ಢಾಕಾಡ್​ ಅವರ ಪುತ್ರಿ ಜ್ಯೋತಿ ಬಾಯಿ(24) ಮೃತರಾಗಿದ್ದಾರೆ. ರಾಜಸ್ಥಾನದ ಬಾಸ್ಕೆಡಾ ಹಳ್ಳಿಯ ಅವರ ಪತಿಯ ಮನೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಶುಕ್ರವಾರ ಘಟನೆ ನಡೆದಿದ್ದು, ಶನಿವಾರ ಮುಂಜಾನೆ ನಮಗೆ ಮಾಹಿತಿ ಸಿಕ್ಕಿದೆ ಎಂದು ರಾಜಸ್ಥಾನದ ಕೆಲ್ವಾರ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಜ್ಯೋತಿ ಮೂರು ವರ್ಷಗಳ ಹಿಂದೆ ವೈದ್ಯ ಜೈ ಸಿಂಗ್​ ಅವರನ್ನು ವಿವಾಹವಾಗಿದ್ದರು. ನಾವು ಜ್ಯೋತಿಯವರ ಮನೆಗೆ ಹೋಗಿ ಪರಿಶೀಲನೆ ಮಾಡಿದಾಗ ಆಕೆಯ ಕುತ್ತಿಗೆಯ ಮೇಲೆ ಕೆಲವು ಗುರುತುಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಜ್ಯೋತಿ ಬಾಯಿ ಪಾಲಕರು ಆಕೆಯ ಗಂಡ ಮತ್ತು ಮೂವರು ಸಂಬಂಧಿಕರ ವಿರುದ್ಧ ದೂರು ನೀಡಿದ್ದು, ತಮ್ಮ ಮಗಳ ಸಾವಿಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಹೇಳಿದ್ದಾರೆ. ಎಫ್​ಐಆರ್ ದಾಖಲು ಮಾಡಿದ್ದೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)