ಮೀನಾ ಜಾದವ್​ ಮತ್ತು ಜಯರಾಂ ಜಾದವ್​ 
ನ್ಯೂಸ್

ರಾಜಸ್ತಾನ ಬಿಜೆಪಿಯಲ್ಲಿ ಟ್ವಿಸ್ಟ್​: ತಂದೆಗೇ ಟಿಕೆಟ್​ ಕೊಡಬೇಡಿ ಎಂದ ಪುತ್ರಿ!

ಜೈಪುರ: ವರ್ಷಾಂತ್ಯದಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಣ ರಂಗೇರುತ್ತಿದೆ. ಗೆಲ್ಲಲೇಬೇಕೆಂದು ಪ್ರಮುಖ ಪಕ್ಷಗಳು ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ರಾಜಸ್ತಾನದ ಬಿಜೆಪಿಯಲ್ಲಿ ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದೆ. ಮಾಜಿ ಶಾಸಕರ ಪುತ್ರಿ ತನ್ನ ತಂದೆಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

ಅಭ್ಯರ್ಥಿಗಳ ಘೋಷಣೆಗೆ ಮುನ್ನ ಮಾಜಿ ಶಾಸಕ ಜಯರಾಂ ಜಾದವ್​ಗೆ ಪಕ್ಷದ ಟಿಕೆಟ್ ನೀಡಬೇಡಿ, ಒಂದು ವೇಳೆ ಟಿಕೆಟ್ ನೀಡಿದರೆ ಅವರ ವಿರುದ್ಧ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಇತರೆ ಟಿಕೆಟ್ ಆಕಾಂಕ್ಷಿಗಳ ಜತೆ ಸೇರಿ ಅವರನ್ನು ಸೋಲಿಸುತ್ತೇನೆ ಎಂದು ಅವರ ಪುತ್ರಿ ಮೀನಾ ಜಾದವ್​ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಒತ್ತಾಯಿಸಿದ್ದಾರೆ. ಅಪ್ಪ, ಮಗಳ ಈ ಕಿತ್ತಾಟ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮತ್ತೊಂದೆಡೆ, ನನ್ನ ಆಸ್ತಿ ಕಬಳಿಕೆಗೆ ನನ್ನ ತಂದೆ ಸಂಚು ಮಾಡುತ್ತಿದ್ದಾರೆ. ಇಂಥವರು ಸಾಮಾನ್ಯ ಜನರಿಗೆ ಏನು ನ್ಯಾಯ ಕೊಡುತ್ತಾರೆ? ಅಷ್ಟೇ ಅಲ್ಲ ನನ್ನ ಮಗನನ್ನು ಸಹ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಇಂಥ ವ್ಯಕ್ತಿಯಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಏತನ್ಮಧ್ಯೆ, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ತಾನದಲ್ಲಿ ಬಿಜೆಪಿ ಗೆಲುವು ಸಾಧಿಸಲು ಯೋಜಿಸುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಹಲವು ಹಿರಿಯ ನಾಯಕರು ಈಗಾಗಲೇ ರಾಜಸ್ತಾನಕ್ಕೆ ಭೇಟಿ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಸಹ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಗೆಲ್ಲಲೇಬೇಕು ಎಂಬ ಉದ್ದೇಶದಿಂದ ಹಸ್ತ ಮುಖಂಡರು ಯೋಜನೆ ರೂಪಿಸುತ್ತಿದ್ದಾರೆ. ಅಪ್ಪ ಮಗಳ ಜಗಳ ಯಾವ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.