ಹಣಮಂತಪ್ಪ ವಲ್ಲೇಪುರೆ (ಹಂಶಕವಿ) ಬೀದರ್
ಶ್ರೀ ಭಾಗವತ ಸುಧಾ ಸಾಗರದ ಮೊದಲನೆಯ ಸ್ಕಂದ ಮೂರನೆಯ ಅಧ್ಯಾಯದಲ್ಲಿ ಭಗವಂತನ ಅವತಾರಗಳ ವರ್ಣನೆಯಾಗಿದೆ. ಭಗವಂತನ 24 ಅವತಾರಗಳಿವೆ. ಪೌರಾಣಿಕ ನಂಬಿಕೆ ಪ್ರಕಾರ ದತ್ತಾತ್ರೇಯ ಭಗವಾನ್ ವಿಷ್ಣುವಿನ 6ನೇ ಅವತಾರ. ಕಲಿಯುಗದ ಕೊನೆಯಲ್ಲಿ ಭಗವಂತನದ್ದು ಕಲ್ಕಿಯಾಗಿ 24ನೇ ಅವತಾರ ಎಂಬುದು ಮಹರ್ಷಿ ವೇದವ್ಯಾಸ ಪ್ರಣೀತ ಶ್ರೀ ಭಾಗವತ ಸುಧಾ ಸಾಗರದಲ್ಲಿ ಉಲ್ಲೇಖವಾಗಿದೆ. ಹಲವು ಅವತಾರಗಳಲ್ಲಿ ಶ್ರೀ ದತ್ತನ ಚರಿತ್ರೆ ವಿಶಿಷ್ಟ, ಅಗೋಚರ.
ಕೃತಯುಗದ ಕೊನೆಯಲ್ಲಿ ತ್ರೇತಾಯುಗ ಪ್ರವೇಶಿಸಲು, ಮಹರ್ಷಿ ಅತ್ರಿ ಮತ್ತು ಅನಸೂಯಾದೇವಿ ದಂಪತಿ ತಪಸ್ಸಿನ ಫಲವಾಗಿ 6ನೇ ಅವತಾರದಲ್ಲಿ ಬ್ರಹ್ಮ, ವಿಷ್ಣು ಮತ್ತು ಶಿವನ ರೂಪದಲ್ಲಿ ಶ್ರೀ ದತ್ತಾತ್ರೇಯ ಅವತರಿಸಿದರು. ಶ್ರೀಗುರು ದತ್ತಾತ್ರೇಯ ಕರುಣಾಮಯಿ. ಮನದುಂಬಿ ಮಾಡುವ ಯಾವ ರೀತಿಯ ಭಕ್ತಿಗೂ ತತ್ಕ್ಷಣ ಬಂದು ಭಕ್ತನಿಗೆ ಅಪ್ಪಿಕೊಳ್ಳುವ ಸ್ವಭಾವ. ದತ್ತಾತ್ರೇಯರು ಅವಧೂತ ತತ್ತ್ವದ ಮೂಲಕ ತ್ರಿಲೋಕ ಕಲ್ಯಾಣ ಮಾಡಿದರು. ಸಾಕ್ಷಾತ್ ಭಗವಂತನೇ ಶ್ರೀಕೃಷ್ಣಾವತಾರದಲ್ಲಿ ಅರ್ಜುನನಿಗೆ ಹೇಳಿರುವಂತೆ ಹಲವಾರು ಯುಗಗಳಿಂದ ಹಲವಾರು ಅವತಾರ ಧರಿಸಿ ಲೋಕಕಲ್ಯಾಣ ಮಾಡಿದವರಲ್ಲಿ ದತ್ತಾವತಾರ ಪ್ರಮುಖ.
ನವನಾಥ ಭಕ್ತಿಸಾರದಲ್ಲಿ ಹೇಳಿರುವಂತೆ ನವನಾರಾಯಣರಾದ ಕವಿ, ಹರಿ, ಅಂತರಿಕ್ಷ, ಪ್ರಬುದ್ಧ, ಪಿಪ್ಪಲಾಯನ, ಅವಿಹೋತ್ರಿ, ದೃಮಿಲ, ಚಮಸ, ಕರಭಾಜನ ಇವರೆಲ್ಲರೂ ಶ್ರೀಮನ್ನಾರಾಯಣನ ಆದೇಶದಂತೆ ಕಲಿಯುಗದಲ್ಲಿ ಕ್ರಮವಾಗಿ ಮಚ್ಛೇಂದ್ರ, ಗೋರಕ್ಷ, ಜಾಲಂಧರ, ಕಾನಿಫ್, ಗಹನಿ, ಚರಪಟಿ, ರೇವಣನಾಥ, ಭರ್ತೃಹರಿ, ನಾಗನಾಥ ಎಂಬ ಹೆಸರುಗಳಲ್ಲಿ ಹಾಗೂ ಶ್ರೀಪಾದ ಶ್ರೀವಲ್ಲಭ, ನರಸಿಂಹ ಸರಸ್ವತಿ, ಸ್ವಾಮಿ ಸಮರ್ಥ (ವೃದ್ಧ ನರಸಿಂಹ ಸರಸ್ವತಿ), ಮಾಣಿಕಪ್ರಭು, ಸಾಯಿಬಾಬಾ, ಗಜಾನನ ಮಹಾರಾಜ ಮೊದಲಾದ ದತ್ತನ ಅವತಾರಗಳಿವೆ.
ಅವತಾರಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಶ್ರೀಪಾದ ಶ್ರೀವಲ್ಲಭ: ತ್ರೇತಾಯುಗದಲ್ಲಿ ಪೀಠಿಕಾಪುರದ ದಂಪತಿ ಸುಮತಿ-ಅಪ್ಪಲರಾಜಶರ್ಮರ ಮನೆಗೆ ದತ್ತರು ಸಾಧು ವೇಷದಲ್ಲಿ ಭಿಕ್ಷೆಗೆ ಬಂದಾಗ ಆದರದಿಂದ ಸ್ವಾಗತಿಸುತ್ತಾರೆ. ‘ತಾಯಿ ನಿನ್ನ ಭಿಕ್ಷೆಯಿಂದ ನಾವು ಪ್ರಸನ್ನಗೊಂಡಿದ್ದೇವೆ. ವರವನ್ನು ಕೇಳಿ’ ಎಂದು ದತ್ತಾತ್ರೇಯ ಹೇಳಿದಾಗ, ‘ನೀವು ನನ್ನ ಮಗನಾಗಿ ಜನಿಸಲು ವರ ನೀಡಿ’ ಎಂದು ಕೇಳುವಳು. ದತ್ತ ತಥಾಸ್ತು ಎಂದರು. ಮುಂದೆ ಸುಮತಿ-ಅಪ್ಪಲರಾಜ ಶರ್ಮ ದಂಪತಿ ಮಗನಾಗಿ ಶ್ರೀಪಾದ ಶ್ರೀವಲ್ಲಭ ನಾಮದಿಂದ ಅವತರಿಸಿ ಹಲವಾರು ಲೀಲೆಗಳನ್ನು ತೋರಿದರು.
ನರಸಿಂಹ ಸರಸ್ವತಿ: ಶ್ರೀಪಾದ ಶ್ರೀವಲ್ಲಭ ಅವತಾರದಲ್ಲಿದ್ದಾಗ ವೇದಸಂಪನ್ನ ಬ್ರಾಹ್ಮಣನ ಹೆಂಡತಿ ಸುಶೀಲೆಯಾದ ಅಂಬಿಕೆಗೆ ಮುಂದಿನ ಜನ್ಮದಲ್ಲಿ ತಾನೇ ಪುತ್ರನಾಗಿ ಜನಿಸಿ ಬರುವುದಾಗಿ ವರ ನೀಡುತ್ತಾರೆ. ಮುಂದಿನ ಜನ್ಮದಲ್ಲಿ ಆಕೆಯು ಕರಂಜ ನಗರದಲ್ಲಿ ಅಂಬಾಭವಾನಿಯಾಗಿ ಜನ್ಮತಾಳಿ ದೊಡ್ಡವಳಾಗಲು ಪಾಲಕರು ಅದೇ ಊರಿನ ಮಾಧವನೊಂದಿಗೆ ವಿವಾಹ ಮಾಡುವರು. ಆ ದಂಪತಿಗೆ ನರಹರಿ ಎಂಬ ಜನ್ಮನಾಮದೊಂದಿಗೆ ಗಂಡು ಮಗುವಾಗುತ್ತದೆ. ಆ ಮಗುವೇ ಮುಂದೆ ನರಸಿಂಹ ಸರಸ್ವತಿ ಎಂಬ ರೂಢಿನಾಮದಿಂದ ಪ್ರಸಿದ್ಧಿ ಹೊಂದಿ ತಾನೇ ದತ್ತಾತ್ರೇಯನೆಂದು ಹಲವು ದೃಷ್ಟಾಂತಗಳ ಮೂಲಕ ತೋರಿಸಿಕೊಡುತ್ತಾರೆ. ಗಾಣಗಾಪುರಕ್ಕೆ ಬಂದು 22 ವರ್ಷ ಇದ್ದು ಭಕ್ತರನ್ನು ಉದ್ಧರಿಸಿ ನಿರ್ಗಣ ಪಾದುಕೆ ಸ್ಥಾಪಿಸಿರುವುದನ್ನು ಶ್ರೀಗುರು ಚರಿತ್ರೆಯಲ್ಲಿ ಹೇಳಲಾಗಿದೆ.
ಸ್ವಾಮಿ ಸಮರ್ಥ: ಗಾಣಗಾಪುರ ನಂತರ ದತ್ತರು ಶ್ರೀಶೈಲ ಕಡೆ ಹೊರಡುತ್ತಾರೆ. ಕದಳಿಯನ್ನು ಸೇರಿ ವಿಟ್ಲದ ಸನಿಹದಲ್ಲಿರುವ ಒಡೆಯಾರಿಗೆ ಬರುವರು. ತದನಂತರ ಕದಳಿಯಲ್ಲಿ (ಅಕ್ಕಮಹಾದೇವಿ ಗುಹೆ ಪಕ್ಕ) ಸುಮಾರು 300 ಸಂವತ್ಸರಗಳವರೆಗೆ ಘೊರ ತಪಸ್ಸು ಮಾಡುವರು. ಆಗ ನರಸಿಂಹ ಸರಸ್ವತಿಗಳ ಮೇಲೆ ಹುತ್ತವೊಂದು ಬೆಳೆಯುತ್ತದೆ. ಕಟ್ಟಿಗೆ ಕಡಿಯುವವನೊಬ್ಬ ಆ ಹುತ್ತದ ಮೇಲಿರುವ ಗಿಡದ ಟೊಂಗೆ ಕಡಿದ. ಅದು ಮೇಲೆ ಬಿದ್ದಾಗ ಹುತ್ತ ಒಡೆದು ಒಳಗಿನಿಂದ ಬೆಳಕೊಂದು ಹರಿಯುತ್ತದೆ. ಆ ಬೆಳಕಿನಲ್ಲಿ ವಯಸ್ಸಾದ ಸಾಧು ಹೊರಬಂದಾಗ ಕಟ್ಟಿಗೆ ಕಡಿದಾತ ಹೆದರುತ್ತಾನೆ. ಅವನನ್ನು ಕಂಡ ವೃದ್ಧ ನರಸಿಂಹ ಸರಸ್ವತಿ, ‘ನೀನು ಮಾಡಿದ್ದೆಲ್ಲ ಒಳ್ಳೆಯದಾಗಿದೆ. ಇಂದಿನಿಂದ ನಿನ್ನ ಮನೆ ಐಶ್ವರ್ಯದಿಂದ ಬೆಳಗಲಿ’ ಅಂತ ಹರಸಿದರು. ಅವರೇ ಮುಂದೆ ಸ್ವಾಮಿ ಸಮರ್ಥ ಹೆಸರಿನಿಂದ ಪ್ರಸಿದ್ಧಿ ಹೊಂದಿ ಲೋಕ ಸಂಚಾರ ಮಾಡುತ್ತ ಅಕ್ಕಲಕೋಟೆಗೆ ಬಂದರು. ಅಲ್ಲಿ ಸುಮಾರು ಎರಡು ಸಂವತ್ಸರ ಪ್ರಕಟ ಸ್ವರೂಪದಲ್ಲಿದ್ದರು.
ಮಾಣಿಕಪ್ರಭು: ಸಕಲ ಮತ ಸಂಸ್ಥಾಪಕರೆಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಮಾಣಿಕಪ್ರಭುಗಳು ಚತುರ್ಥ ದತ್ತಾವತಾರಿ. ಬಸವಕಲ್ಯಾಣ ಹತ್ತಿರದ ಲಾಡವಂತಿಯಲ್ಲಿ 1817ರ ದತ್ತ ಜಯಂತಿ ದಿನವೇ ಜನ್ಮ ತಾಳಿದರು. ಇವರು 16 ವರ್ಷಕ್ಕೆ ತಲುಪಿದಾಗ ಪ್ರಭು ದೈವಾಂಶಸಂಭೂತನೆಂದು ಅರಿಯದ ಮಾವನು, ‘ನೀನು ಮೈಗಳ್ಳ, ನಿರುದ್ಯೋಗಿ’ ಎಂದೆಲ್ಲ ಬೈಯುತ್ತಾನೆ. ಲೋಕೋದ್ಧಾರಕ್ಕಾಗಿ ಮನೆಯಿಂದ ಹೊರಬಿದ್ದ ಪ್ರಭುಗಳು ವಿವಿಧೆಡೆ ಸಂಚರಿಸಿ ಹುಮನಾಬಾದ್ ಹತ್ತಿರದ ಬಸವನ ಹಳ್ಳದ ದಂಡೆಯಲ್ಲಿ ಕುಟೀರ ನಿರ್ವಿುಸಿಕೊಂಡು ಇರುತ್ತಾರೆ. ಅದುವೇ ಇಂದಿನ ಮಾಣಿಕನಗರ. ಕ್ರಿ.ಶ. 1865ರಲ್ಲಿ ಸಂಜೀವಿನಿ ಮಹಾಸಮಾಧಿ ಹೊಂದುತ್ತಾರೆ.
ಶಿರಡಿ ಸಾಯಿಬಾಬಾ: ದತ್ತಾತ್ರೇಯರು ಕಲಿಯುಗದ ಪ್ರಥಮ ಶ್ರೀಪಾದ ಶ್ರೀವಲ್ಲಭ ಅವತಾರದಲ್ಲಿರುವಾಗ ಒಮ್ಮೆ ಹಿಮಾಲಯ ಪ್ರಾಂತ್ಯಕ್ಕೆ ಹೋಗಿದ್ದರು. ಆಗ ಅಲ್ಲಿನ ಹನುಮಂತನನ್ನು ಕುರಿತು, ‘ನೀನು ಸಾಯಿಬಾಬಾನಾಗಿ ಅವತಾರ ತಾಳು’ ಎಂದರು. ಮುಂದೆ ಆ ಹನುಮನೇ ಇಂದಿನ ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಪಾಥ್ರಿ (ಪತ್ರಿ) ಗ್ರಾಮದಲ್ಲಿ ಸಾಯಿಬಾಬಾ ಆಗಿ ಜನಿಸಿದರು. 1865ರಲ್ಲಿ ಮಾಣಿಕಪ್ರಭುಗಳು ಜೀವಂತ ಸಮಾಧಿ ಹೊಂದಲು ಅವರ ಶಾಶ್ವತ ಆತ್ಮ ಸ್ವಾಮಿ ಸಮರ್ಥರಲ್ಲಿ ಕೂಡಿಕೊಳ್ಳುತ್ತದೆ. ತದನಂತರ 1878ರಲ್ಲಿ ಅಕ್ಕಲಕೋಟದಲ್ಲಿ ಸ್ವಾಮಿ ಸಮರ್ಥರು ನಿರ್ವಾಣ ಹೊಂದಲು ಅವರ ಆತ್ಮಜ್ಯೋತಿ ಶಿರಡಿ ಸಾಯಿ ಬಾಬಾರಲ್ಲಿ ಲೀನವಾಗುತ್ತದೆ. ಹೀಗೆ ದತ್ತಾತ್ರೇಯನೇ ತನ್ನ ಅವತಾರಗಳ ಮೂಲಕ ಹನುಮಂತನ ಅವತಾರವಾದ ಸಾಯಿ ಬಾಬಾರಲ್ಲಿ ಲೀನವಾಗುವನು.
ಗಜಾನನ ಮಹಾರಾಜ: ಶ್ರೀಪಾದ ಶ್ರೀವಲ್ಲಭರು ತನ್ನ ಮುಂದಿನ ಅವತಾರದ ಬಗ್ಗೆ ಶ್ರೀಪಾದ ಶ್ರೀವಲ್ಲಭ ಚರಿತಾಮೃತದಲ್ಲಿ ಹೇಳಿರುವಂತೆ ಶ್ರೀ ಗಜಾನನ ಮಹಾರಾಜರು ದತ್ತಾತ್ರೇಯನ ಷಷ್ಠಮ ಅವತಾರ. ಆದರೆ, ಗಜಾನನ ಮಹಾರಾಜರ ಜನನ, ಬಾಲ್ಯ, ತಂದೆ-ತಾಯಿ ಯಾರು? ಹಾಗೂ ಎಲ್ಲಿಂದ ಬಂದವರೆಂಬುದನ್ನು ಮಾತ್ರ ರಹಸ್ಯವಾಗಿದೆ. ಏಕಾಏಕಿ 1878ರ ಫೆಬ್ರವರಿ 23ರಂದು ಮೊದಲ ಬಾರಿಗೆ ಶೇಗಾಂವಿಯ ದೇವಿದಾಸ ಎಂಬ ಮಠಾಧಿಪತಿಯ ಬ್ರಾಹ್ಮಣ ಭೋಜನಕೂಟದ ನಂತರ ಜನರು ತಿಂದು ಬಿಸಾಡಿದ ಎಂಜಲು ಪತ್ರೋಳಿಯ ರಾಶಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆಗ ಅವರ ವಯಸ್ಸು 16. ಆರಂಭದಲ್ಲಿ ಹುಚ್ಚನೆಂದು ಕರೆದರೂ ನಂತರ ಅವರ ಮಹಿಮೆ ಅರಿತು ಅವತಾರಿ ಪುರುಷರೆಂದು ಪೂಜಿಸಲಾರಂಭಿಸಿದರು. ಅವರದು ಯಾವುದೇ ರೀತಿಯ ಧರ್ಮ-ಕರ್ಮ, ಕಟ್ಟುಪಾಡುಗಳಿಲ್ಲದ ಅವಧೂತ ಸಂಪ್ರದಾಯವಾಗಿತ್ತು. 1910ರ ಸೆಪ್ಟೆಂಬರ್ 4 ಗುರುವಾರದಂದು ಮಹಾಸಮಾಧಿ ತೆಗೆದುಕೊಳ್ಳುವರು.
ಇಷ್ಟೇ ಅಲ್ಲದೆ, ದತ್ತಾತ್ರೇಯ ಲೋಕಕಲ್ಯಾಣಕ್ಕಾಗಿ ಇನ್ನೂ ಹಲವಾರು ವಿಶಿಷ್ಟ ಅವತಾರ ತಾಳಿದರು. ವಾಸುದೇವಾನಂದ ಸರಸ್ವತಿ, ಪಂತ್ ಮಹಾರಾಜ ಬಾಳೆಕುಂದ್ರಿ, ರಂಗಾವಧೂತರು, ಶ್ರೀಧರ ಸ್ವಾಮಿ, ರಾಮಾನಂದ ಸಮರ್ಥ ರಾಮದಾಸರು, ಚಿದಾನಂದಾವಧೂತರು, ಚಿದಂಬರ ಸ್ವಾಮಿ, ಚಾಳಕಾಪುರ-ಹುಬ್ಬಳ್ಳಿಯ ಸಿದ್ಧಾರೂಢರು, ಶಂಕರ ಮಹಾರಾಜ ಪುಣೆ, ಯೋಗಾನಂದ ಸರಸ್ವತಿ, ಚಂದ್ರಶೇಖರ ಭಾರತಿ ಸ್ವಾಮಿ, ರಾಮಕೃಷ್ಣ ಪರಮಹಂಸರು, ಪರಮಹಂಸ ಯೋಗಾನಂದರು, ನಾಮದೇವ ಮಹಾರಾಜ, ಯರನಳ್ಳಿಯ ದಿಗಂಬರ ಮಾಣಿಕನಾಥರು, ಕರಕನಳ್ಳಿಯ ಬಕ್ಕಪ್ರಭು, ಶ್ರೀಪತಾನಂದ ಮಹಾರಾಜ, ಹುಡಗಿಯ ದಿಗಂಬರ ಕರಿಬಸವೇಶ್ವರರು, ರೇಕುಳಗಿಯ ಶಂಭುಲಿಂಗರು, ಹಳೆಂಬರದ ವೀರಭದ್ರಪ್ಪ, ತಾಡವಾಯಿಯ ಶಬರಿ ಮಾತೆ, ಯಾನಾಗುಂದಿಯ ಮಾತೆ ಮಾಣಿಕೇಶ್ವರಿ, ಮುರಳಿಧರ ಮಹಾರಾಜ ಬೀದರ್- ಮೊದಲಾದವು ಈ ಅವತಾರಗಳಲ್ಲಿ ಪ್ರಮುಖವಾದವು.
(ಲೇಖಕರು ಹಿರಿಯ ಸಾಹಿತಿ ಮತ್ತು ಶ್ರೀ ದತ್ತ ಭಾಗವತ ಗ್ರಂಥ ರಚನೆಕಾರರು)