ಸೊರಬ: ಕವಿ ಮನಸ್ಸುಗಳಿಗೆ ಕಾವ್ಯ ರಚಿಸಲು, ಪ್ರಸ್ತುತಪಡಿಸಲು ದಸರಾ ಉತ್ಸವದ ವೇದಿಕೆಯಲ್ಲಿ ಅವಕಾಶ ನೀಡಿರುವುದು ಸಂತಸದ ಸಂಗತಿ ಎಂದು ಸಿದ್ದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ನಾಯಕ್ ಕುಂಬ್ರಿಗದ್ದೆ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ದಸರಾ ಉತ್ಸವ ಸಮಿತಿಯಿಂದ ಸುರಭಿ ಸಾಂಸ್ಕೃತಿಕ ವೇದಿಕೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ದಸರಾ ಧಾರ್ಮಿಕ ಆಚರಣೆಯಷ್ಟೇ ಅಲ್ಲ. ಇಲ್ಲಿ ಪ್ರತಿಭೆ ಅನಾವರಣಕ್ಕೆ ಅವಕಾಶವಿದೆ. ಸಾಮಾಜಿಕ, ಸಾಂಸ್ಕೃತಿಕ ಅಭಿವ್ಯಕ್ತಿಗೆ ವೇದಿಕೆಯಿದು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಷಣ್ಮುಖಾಚಾರ್ ಮಾತನಾಡಿದರು. ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪರಶುರಾಮಪ್ಪ ಬಹುಮಾನ ವಿತರಿಸಿದರು. ನಿವೃತ್ತ ಶಿಕ್ಷಕ ವಿ.ಬಿ.ಜಾವೂರ್ ಹಾಗೂ ಅಂಕರವಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ರಾಜಶೇಖರ್ ಕವನಗಳ ವಿಶ್ಲೇಷಣೆ ಮಾಡಿದರು.
ಕವಿಗೋಷ್ಠಿಯಲ್ಲಿ ಇಪ್ಪತ್ತೊಂದು ಕವಿಗಳು ಕವನಗಳನ್ನು ವಾಚಿಸಿದರು. ಲಲಿತಾ ಪ್ರಥಮ, ಶಿಲ್ಪಾ ಹೆಗಡೆ ದ್ವಿತೀಯ ಹಾಗೂ ಮೋಟಪ್ಪ ಬಿದರಗೇರಿ ತೃತೀಯ ಬಹುಮಾನ ಪಡೆದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಜಿ.ಪ್ರಶಾಂತ ಮೇಸಿ, ಕಸಾಪ ಮಾಜಿ ಅಧ್ಯಕ್ಷ ಡಾ. ಎಂ.ಕೆ.ಭಟ್, ಮಹಿಳಾ ದಸರಾ ಉತ್ಸವ ಸಮಿತಿ ಅಧ್ಯಕ್ಷೆ ಸುಜಾತಾ ಜೋತಾಡಿ, ವೀಣಾ ಟೇಮ್ಕರ್, ತಾಲೂಕು ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಎಚ್.ಗುರುಮೂರ್ತಿ, ರಮೇಶ್, ರೇವಣಪ್ಪ, ಲಿಂಗರಾಜ ಗೌಡ, ಮೋಹನ್, ಉದ್ಯಮಿ ಎಂ.ಎನ್.ಗುರುಮೂರ್ತಿ ಇತರರಿದ್ದರು.