Darshan | ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ. ಧನ್ವೀರ್ಗೌಡ ನಾಯಕನಾಗಿ ನಟಿಸಿರುವ ಇಂದು (10) ಬಿಡುಗಡೆ ಕಂಡ ವಾಮನ ಚಿತ್ರದ ಪ್ರೀಮಿಯರ್ ಶೋವನ್ನು ವೀಕ್ಷಿಸಲು ಬುಧವಾರ (9) ರಾತ್ರಿ 8 ಗಂಟೆ ಸುಮಾರಿಗೆ ನಟ ದರ್ಶನ್ ಬೆಂಗಳೂರಿನ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಆದರೆ ಇದೀಗ ದರ್ಶನ್ ಕೋರ್ಟ್‌ಗೆ ಗೈರಾಗಿ ಸಿನಿಮಾ ವೀಕ್ಷಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಬೆಂಗಳೂರಿನ ಮಾಲ್‌ಗೆ ದರ್ಶನ್ ಪ್ರವೇಶಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಅಭಿಮಾನಿಗಳು ಜೈಕಾರ ಹಾಕುವ ಮೂಲಕ ನಟನನ್ನ ಬರ ಮಾಡಿಕೊಂಡರು. ಇನ್ನೂ ಕಾರಿನಿಂದ ಕೆಳಗಿಳಿದ ನಟ ದರ್ಶನ್, ಕುಂಟುತ್ತಲೇ ಸಿನಿಮಾ ಥಿಯೇಟರ್ಗೆ ಎಂಟ್ರಿ ಕೊಟ್ಟು, ಮೂರು ಗಂಟೆಗಳ ಕಾಲ ಇಡೀ ಚಿತ್ರವನ್ನು ವೀಕ್ಷಣೆ ಮಾಡಿದರು.
ಈ ಚಿತ್ರವನ್ನು ವೀಕ್ಷಿಸುತ್ತಿದ್ದಾಗ ಅವರ ಜೊತೆ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಸಹ ಭಾಗಿಯಾಗಿದ್ದರು. ಆದರೆ ಜಾಮೀನಿನ ಮೇಲೆ ಹೊರಗಿರುವ ಆರೋಪಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಸಾಕ್ಷಿಯನ್ನು ಭೇಟಿ ಮಾಡಲು ಅವಕಾಶವಿಲ್ಲ. ಹಾಗಾಗಿ ಕರ್ನಾಟಕ ರಾಜ್ಯ ಪೊಲೀಸರು ಈಗ ದರ್ಶನ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗ್ತಾ ಇದೆ.
ಇನ್ನೂ ರೇಣುಕಾಸ್ವಾಮಿ ಕೊಲೆ ನಡೆದ ದಿನ ಪಾರ್ಟಿಯಲ್ಲಿ ನಟ ದರ್ಶನ್ ಒಟ್ಟಿಗೆ ಹಾಸ್ಯನಟ ಚಿಕ್ಕಣ್ಣ ಕೂಡ ಕಾಣಿಸಿಕೊಂಡಿದ್ದರು. ಆದರೆ ಚಿಕ್ಕಣ್ಣ ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದ್ದು, ಈ ಪ್ರಕರಣಕ್ಕೆ ಒಬ್ಬ ಸಾಕ್ಷಿದಾರ ಆಗಿದ್ದಾರೆ ಅಷ್ಟೇ. ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಚಿಕ್ಕಣ್ಣ ಅಲ್ಲಿಗೆ ಹೋಗಿ ಆರೋಪಿಯನ್ನು ಭೇಟಿ ಮಾಡಿದ್ದರು. ಇದಾದ ಬಳಿಕ ಬಸವೇಶ್ವರ ನಗರ ಠಾಣೆ ಪೊಲೀಸರು ಸಾಕ್ಷಿದಾರನ ಮೇಲೆ ದರ್ಶನ್ ಪ್ರಭಾವ ಬೀರುತ್ತಿದ್ದಾರೆಯೇ ಎಂಬುದನ್ನು ತಿಳಿಯಲು ಚಿಕ್ಕಣ್ಣನನ್ನು ವಿಚಾರಣೆಗಾಗಿ ಕರೆದಿದ್ದರು. ನಂತರ ನಟ ದರ್ಶನ್ ಜಾಮೀನಿನ ಮೇಲೆ ಹೊರಗೆ ಬಂದಿರೋದು ಎಲ್ಲರಿಗೂ ಗೊತ್ತೇ ಇದೆ. ಆದರೆ ದರ್ಶನ್ ಕೇಸಿನ ಸಾಕ್ಷಿದಾರ ಆಗಿರುವ ಚಿಕ್ಕಣ್ಣನ ಜೊತೆ ಸಿನಿಮಾ ವೀಕ್ಷಣೆಗೆ ಮಾಡಿರುವುದರಿಂದ ದರ್ಶನ್ಗೆ ಕಾನೂನು ರೀತಿಯ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
(ಏಜೆನ್ಸೀಸ್)
ಕಳೆದ ಎರಡು ದಿನಗಳ ಹಿಂದೆ ಕೋರ್ಟ್ ವಿಚಾರಣೆಗೆ ಹಾಜರಾಗದೆ ವಿನಾಯಿತಿ ಕೋರಿದ್ದ ದರ್ಶನ್, ಕೇವಲ ಒಂದು ದಿನದ ಅಂತರದಲ್ಲಿ ತನ್ನ ಆಪ್ತ ಧನ್ವೀರ್ ನಟನೆಯ ವಾಮನ ಸಿನಿಮಾದ ವಿಶೇಷ ಶೋವನ್ನು 3 ಗಂಟೆಗಳ ಕಾಲ ಕುಳಿತು ವೀಕ್ಷಣೆ ಮಾಡಿದ್ದಾರೆ. ಹಾಗಾಗಿ ಕೋರ್ಟ್‌ಗೆ ಗೌರವ ಕೊಡದೇ ಸ್ನೇಹಿತನಿಗಾಗಿ ಸಿನಿಮಾ ನೋಡಲು ಹೋದ ಕಾರಣ ಈ ಆರೋಪ ಕೇಳಿಬಂದಿದೆ.