Darling Kirshna : ಡಾರ್ಲಿಂಗ್ ಕೃಷ್ಣ ಅವರು ಮಾಸ್ಕ್ ಧರಿಸಿ ಫ್ಯಾಮಿಲಿ ಕೋರ್ಟ್ನಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದ್ದಂತೆ ದಾಂಪತ್ಯದಲ್ಲಿ ಸಮಸ್ಯೆನಾ? ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿತ್ತು. ಆದರೆ ಅಸಲಿ ಕಥೆ ಬೇರೆನೆ ಇದೆ.
ಡಾರ್ಲಿಂಗ್ ಕೃಷ್ಣ ಗುರುತು ಸಿಗಬಾರದು ಎಂಬ ಕಾರಣಕ್ಕೆ ಅವರು ಮಾಸ್ಕ್ ಧರಿಸಿದ್ದಾರೆ. ಆದರೂ ಕೂಡ ಅದು ಡಾರ್ಲಿಂಗ್ ಕೃಷ್ಣ ಎಂಬುದು ಗೊತ್ತಾಗುತ್ತಿದೆ. ಅಂದಹಾಗೆ, ಡಾರ್ಲಿಂಗ್ ಕೃಷ್ಣ ಅವರು ಫ್ಯಾಮಿಲಿ ಕೋರ್ಟ್ನಲ್ಲಿ ಕಾಣಿಸಿಕೊಂಡಿರುವುದು ಸಿನಿಮಾ ಸಲುವಾಗಿ ಎನ್ನಲಾಗಿದೆ.
ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ ಕೂಡ ಡಾರ್ಲಿಂಗ್ ಕೃಷ್ಣ ಅವರು ಫೇಮಸ್ ಆಗಿದ್ದಾರೆ. ‘ಲವ್ ಮಾಕ್ಟೇಲ್’, ‘ಲವ್ ಮಾಕ್ಟೇಲ್ 2’ ಸಿನಿಮಾಗಳನ್ನು ನಿರ್ದೇಶಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಈಗ ಅವರ ನಿರ್ದೇಶನದಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾ ಕೂಡ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಫ್ಯಾಮಿಲಿ ಕೋರ್ಟ್ನ ದೃಶ್ಯಗಳು ಇರಲಿವೆ. ಹಾಗಾಗಿ ಫ್ಯಾಮಿಲಿ ಕೋರ್ಟ್ ಹೇಗಿರುತ್ತದೆ ಎಂಬುದನ್ನು ನೋಡಲು ಡಾರ್ಲಿಂಗ್ ಕೃಷ್ಣ ಅಲ್ಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ 2021ರಲ್ಲಿ ಮದುವೆ ಆದರು. ಈ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗು ಇದೆ. ಅವರಿಬ್ಬರ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇದೆ. ಡಾರ್ಲಿಂಗ್ ಕೃಷ್ಣ ಅವರು ಫ್ಯಾಮಿಲಿ ಕೋರ್ಟ್ ನೋಡಲು ಬಂದಿರುವುದರಿಂದ ಅವರ ಮುಂದಿನ ಸಿನಿಮಾ ಲವ್ ಮಾಕ್ಟೇಲ್ 3’ ಕಥೆಯ ಬಗ್ಗೆ ಕುತೂಹಲ ಹೆಚ್ಚುವಂತಾಗಿದೆ.