ಕುದೂರು ಪಟ್ಟಣದ ಚೌಡೇಶ್ವರಿ ಸರ್ಕಲ್ ಬಳಿ ಬಿರುಗಾಳಿಗೆ ಬಾಗಿರುವ ವಿದ್ಯುತ್ ಕಂಬಗಳು.
ಕುದೂರು: ಪಟ್ಟಣದ ಬೈಪಾಸ್ ರಸ್ತೆಯ ಚೌಡೇಶ್ವರಿ ಸರ್ಕಲ್ ಬಳಿ ರಸ್ತೆ ಬದಿಯಲ್ಲಿರುವ 2&3 ವಿದ್ಯುತ್ ಕಂಬಗಳು ಬಾಗಿದ್ದು, ಯಾವುದೇ ಣದಲ್ಲಾದರೂ ಕುಸಿದು ಬೀಳುವ ಆತಂಕ ಮೂಡಿಸಿವೆ. ಇದು ಸಾರ್ವಜನಿಕರು ಹಾಗೂ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡುವ ಮುನ್ಸೂಚನೆ ನೀಡುತ್ತಿದೆ.
ಕಳೆದ ಕೆಲವು ದಿನಗಳಿಂದ ಬೀಸುತ್ತಿರುವ ಬಿರುಗಾಳಿ ಹಾಗೂ ಮಳೆಗೆ ಈ ಕಂಬಗಳು ರಸ್ತೆಯ ಕಡೆಗೆ ವಾಲಿ ನಿಂತಿವೆ. ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ವಾಹನಗಳು ಸಂಚರಿಸುತ್ತವೆ. ಕಂಬ ಸಂಪೂರ್ಣ ಬಾಗಿ, ತಂತಿಗಳು ಜೋತು ಬಿದ್ದಿರುವುದರಿಂದ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆಯಲ್ಲಂತೂ ಸರಿಯಾದ ಬೀದಿ ದೀಪಗಳಿಲ್ಲದೆ ಸಂಚಾರ ಮತ್ತಷ್ಟು ಅಪಾಯಕಾರಿಯಾಗಿದೆ.
ಶಾಸಕರ ಸೂಚನೆಗೂ ಬೆಲೆಯಿಲ್ಲ: 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಪಟ್ಟಣದಲ್ಲಿ ಓರ್ವ ಲೈನ್ಮ್ಯಾನ್ ಕೂಡ ಫೀಲ್ಡ್ನಲ್ಲಿ ಇಲ್ಲದಿರುವುದು ದುರಂತ. ಕುದೂರು ಬೆಸ್ಕಾಂ ಕಚೇರಿಯಲ್ಲಿ ಲೈನ್ಮ್ಯಾನ್ ಹುದ್ದೆಗೆ ನೇಮಕವಾಗಿರುವ ಇಬ್ಬರನ್ನು ಹಲವು ವರ್ಷಗಳಿಂದ ಕಚೇರಿ ಕೆಲಸಕ್ಕೇ ಬಳಸಿಕೊಳ್ಳಲಾಗುತ್ತಿದೆ. ಪರಿಣಾಮವಾಗಿ, ಪಟ್ಟಣದಲ್ಲಿ ವಿದ್ಯುತ್ ಸಮಸ್ಯೆ ಎದುರಾದಾಗ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ. ಈ ಕುರಿತು ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರ ಗಮನಕ್ಕೆ ತಂದಾಗ, ಕಚೇರಿ ಸಿಬ್ಬಂದಿಯನ್ನು ಫೀಲ್ಡ್ಗೆ ನಿಯೋಜಿಸಲು ಶಾಸಕರು ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಗ್ರಾಮೀಣ ಭಾಗದ ಮುಖ್ಯ ರಸ್ತೆ ಹಾಗೂ ವಸತಿ ಪ್ರದೇಶಗಳಲ್ಲಿರುವ ವಿದ್ಯುತ್ ಕಂಬ ಮತ್ತು ತಂತಿಗಳಿಗೆ ದಟ್ಟವಾಗಿ ಗಿಡ, ಗಂಟಿ, ಬಳ್ಳಿಗಳು ಹಬ್ಬಿಕೊಂಡಿವೆ. ಮಳೆ ಬಂದಾಗ ಈ ಬಳ್ಳಿಗಳ ಮೂಲಕ ಇಡೀ ಕಂಬಕ್ಕೆ ವಿದ್ಯುತ್ ಪ್ರವಹಿಸುವ ಅಪಾಯವಿರುತ್ತದೆ. ಬೆಸ್ಕಾಂ ಕಚೇರಿಯ ಸಮೀಪವೇ ಇಂತಹ ಕಂಬಗಳಿದ್ದು, ಸಾರ್ವಜನಿಕರು ಮತ್ತು ಜಾನುವಾರುಗಳು ಇಲ್ಲಿಯೇ ಓಡಾಡುತ್ತವೆ. ಕಣ್ಣೆದುರೇ ಅಪಾಯವಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಕತ್ತಲಲ್ಲಿ ಮುಳುಗಿದ ಬೀದಿಗಳು
ಪಟ್ಟಣದಲ್ಲಿ ನಡೆಯುತ್ತಿರುವ ಹೈಟೆಕ್ ಕ್ರೀಡಾಂಗಣದ ಕಾಂಪೌಂಡ್ ನಿರ್ಮಾಣಕ್ಕಾಗಿ ರಸ್ತೆ ಬದಿಯಲ್ಲಿದ್ದ 2&3 ವಿದ್ಯುತ್ ಕಂಬಗಳನ್ನು ಬೆಸ್ಕಾಂ ಇಲಾಖೆ ತೆರವುಗೊಳಿಸಿತ್ತು. ಇದರಿಂದಾಗಿ ಎಸ್ಎಂಎಚ್ ಶಾಲೆಯ ಕಡೆಯ ಮನೆಗಳ ಬೀದಿಗಳು ಕತ್ತಲಿನಿಂದ ಆವೃತವಾಗಿವೆ. ಈಗ ಕಾಂಪೌಂಡ್ ಕಾಮಗಾರಿ ಮುಗಿದಿರುವುದರಿಂದ ಕೂಡಲೇ ಹೊಸ ಕಂಬಗಳನ್ನು ಅಳವಡಿಸಿ, ಬೀದಿ ದೀಪದ ವ್ಯವಸ್ಥೆ ಕಲ್ಪಿಸಬೇಕಿದೆ.
ಕುದೂರು ಬೆಸ್ಕಾಂ ಇಲಾಖೆಯ ಎಇಇ ಸಾರ್ವಜನಿಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಕಚೇರಿಗೆ ಅವರು ಯಾವಾಗ ಬರುತ್ತಾರೆ, ಹೋಗುತ್ತಾರೆ ಎಂಬ ಮಾಹಿತಿಯೇ ಇರುವುದಿಲ್ಲ. ಈ ಹಿಂದೆ ಇವರ ಬೇಜವಾಬ್ದಾರಿತನ ಖಂಡಿಸಿ 2&3 ಬಾರಿ ರೈತರು ಪ್ರತಿಭಟನೆ ನಡೆಸಿದ್ದರು. ಇನ್ನಾದರೂ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
"
ಪಟ್ಟಣದಲ್ಲಿ ಸರಿಯಾಗಿ ಒಬ್ಬ ಲೈನ್ಮ್ಯಾನ್ ಇಲ್ಲ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಂಬಗಳು ಬಾಗಿವೆ, ಕಂಬಗಳಿಗೆ ಬಳ್ಳಿ ಹಬ್ಬಿವೆ. ಕೂಡಲೇ ಬೆಸ್ಕಾಂ ಇಲಾಖೆ ಈ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ.
— > ಹೆಸರೇಳಲಿಚ್ಛಿಸದ ರೈತ ಮುಖಂಡ, ಕುದೂರು.
"
ಬಾಗಿರುವ ವಿದ್ಯುತ್ ಕಂಬಗಳ ಪರಿಶೀಲನೆ ನಡೆಸಿ ಸರಿಪಡಿಸಲಾಗುವುದು. ರಾಮಲೀಲಾ ಮೈದಾನದ ಪಕ್ಕದ ರಸ್ತೆಯಲ್ಲಿ ತೆರವುಗೊಳಿಸಲಾದ ವಿದ್ಯುತ್ ಕಂಬಗಳನ್ನು ಶ್ರೀದಲ್ಲೆ ಪುನರ್ ನಿರ್ಮಿಸಲಾಗುವುದು.
— > ಚಂದನಾ, ಎಇಇ, ಬೆಸ್ಕಾಂ ಕುದೂರು.