ತುಕ್ಕು ಹಿಡಿದು ಕಿತ್ತು ಹೋಗಿರುವ ಬ್ಯಾರಿಕೇಡ್‌ಗಳು 
ನ್ಯೂಸ್

ಬಿಆರ್‌ಟಿಎಸ್ BRTS ಚಿಗರಿ ಪಥದಲ್ಲಿ "ಭಾರಿಕೇಡು"

ಮಂಜುನಾಥ ಎಸ್. ಅಂಗಡಿ ಧಾರವಾಡ
ರಾಜ್ಯದಲ್ಲಿ ಎಲ್ಲೂ ಇಲ್ಲದ ಸಾರಿಗೆ ವ್ಯವಸ್ಥೆ ಅವಳಿನಗರದಲ್ಲಿದೆ. ಅದುವೇ ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಬಿಆರ್‌ಟಿಎಸ್). ಅವಳಿನಗರದಲ್ಲಿ ಅನುಷ್ಠಾನಗೊಂಡಾಗಿನಿ0ದ ಬಿಆರ್‌ಟಿಎಸ್ ಸುದ್ದಿಯಲ್ಲಿರುತ್ತದೆ. ಹು-ಧಾ ನಡುವಿನ ಬಿಆರ್‌ಟಿಎಸ್ ಪಥದಗುಂಟ ಆಳೆತ್ತರ ಕಸ ಬೆಳೆದಿದ್ದರೂ ಅಧಿಕಾರಿಗಳ ಕಣ್ಣಿಗೆ ಬಿದ್ದಂತಿಲ್ಲ.
ಅವಳಿನಗರ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಿದೆ. ಆದರೆ, ಆಗಾಗ ಕೆಟ್ಟು ನಿಲ್ಲುವ `ಚಿಗರಿ' ಬಸ್‌ಗಳು, ಅಪಘಾತಗಳು, ಎಸಿ ಇಲ್ಲದ ಮತ್ತು ಗಲೀಜಾದ ಬಸ್‌ಗಳು, ನಿಲ್ದಾಣಗಳಲ್ಲಿ ಸ್ವಚ್ಛತೆ ಇಲ್ಲದಿರುವ ಬಗ್ಗೆ ಪ್ರಯಾಣಿಕರಿಗೆ ಆಕ್ಷೇಪ ವ್ಯಕ್ತವಾಗುತ್ತಿರುತ್ತದೆ. ಬಿಆರ್‌ಟಿಎಸ್ ಹುಬ್ಬಳ್ಳಿ- ಧಾರವಾಡ ಹೆಮ್ಮೆ ಎಂದು ಹೇಳಿಕೊಳ್ಳುವಂಥ ನಿರ್ವಹಣೆ ಮಾಡುವಂತೆ ಜಿಲ್ಲೆಯ ಜನಪ್ರತಿನಿಧಿಗಳು ತಾಕೀತು ಮಾಡಿದರೂ ಅಧಿಕಾರಿಗಳ ನಿರ್ಲಕ್ಷ÷್ಯ ಮುಂದುವರಿದಿದೆ.
ಬಿಆರ್‌ಟಿಎಸ್ ಪಥದಗುಂಟ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಬ್ಯಾರಿಕೇಡ್‌ಗಳ ಆಚೀಚೆ ಆಳೆತ್ತರ ಕಳೆ ಬೆಳೆದಿದೆ. ಬ್ಯಾರಿಕೇಡ್‌ಗಳ ಬಣ್ಣ ಮಾಸಿದೆ. ಇವುಗಳ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಆದರೆ, ಗುತ್ತಿಗೆ ಪಡೆದವರಿಗೆ ಕಸ ಕಿತ್ತು ಸ್ವಚ್ಛಗೊಳಿಸುವಂತೆ ಸೂಚಿಸುವ ಮನಸ್ಥಿತಿ ಅಧಿಕಾರಿಗಳಲ್ಲಿಲ್ಲ. ಇನ್ನು ಬಹುತೇಕ ಕಡೆಗಳಲ್ಲಿ ಬ್ಯಾರಿಕೇಡ್‌ಗಳು ಕಿತ್ತು ಹೋಗಿವೆ. ಅವುಗಳನ್ನು ದುರಸ್ತಿ ಮಾಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಕೆಲವೆಡೆ ಸಂಚಾರಕ್ಕಾಗಿ ಜನರೇ ಬ್ಯಾರಿಕೇಡ್‌ಗಳನ್ನು ಕಿತ್ತು ಹಾಕಿ ನಡೆದಾಡಲು ಅನುಕೂಲ ಮಾಡಿಕೊಂಡಿದ್ದಾರೆ. ತುಕ್ಕು ಹಿಡಿದ ಬ್ಯಾರಿಕೇಡ್‌ಗಳು ಸಾಮಾನ್ಯ ಪಥದಲ್ಲಿ ಸಂಚರಿಸುವ ವಾಹನ ಸವಾರರ ಪ್ರಾಣ ತೆಗೆಯಲು ಕಾಯುತ್ತಿವೆ. ಕೊಂಚ ಆಯ ತಪ್ಪಿದರೂ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ.
ನಿರ್ವಹಣೆಗೆ ಇದು ಸಕಾಲ
ಮಳೆಗಾಲ ಮುಗಿದಿದ್ದು, ಬ್ಯಾರಿಕೇಡ್‌ಗಳಿಗೆ ಬಣ್ಣ ಹಚ್ಚಿ ಚೆಂದಗೊಳಿಸುವುದು, ಮುರಿದ- ತುಕ್ಕು ಹಿಡಿದ ಬ್ಯಾರಿಕೇಡ್‌ಗಲನ್ನು ಬದಲಾಯಿಸುವುದು, ಕಳೆ ತೆಗೆದು ಸ್ವಚ್ಛಗೊಳಿಸಲು ಇದು ಸಕಾಲ. ಗುತ್ತಿಗೆ ಪಡೆದವರನ್ನು ಎಚ್ಚರಿಸಿ ನಿರ್ವಹಣೆ- ದುರಸ್ತಿ ಮಾಡುವಂತೆ ಸೂಚಿಸಲು ಬಿಆರ್‌ಟಿಎಸ್ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.
"

ಅವಳಿನಗರ ನಡುವಿನ ಬಿಆರ್‌ಟಿಎಸ್ ಪಥಗಳಿಗೆ ಹೊಂದಿಕೊ0ಡ ಬ್ಯಾರಿಕೇಡ್‌ಗಳ ಅಕ್ಕಪಕ್ಕ ಕಸ ತೆಗೆಯಲು ಗುತ್ತಿಗೆ ನೀಡಲಾಗಿದೆ. ಮಳೆಗಾಲ ಈಗಷ್ಟೇ ಮುಗಿದಿದ್ದು, ಕಸ ತೆಗೆದು ಸ್ವಚ್ಛತೆ ಮಾಡಲಿದ್ದಾರೆ. ಕಿತ್ತು ಹೋಗಿರುವ ಅಪಾಯಕಾರಿ ಬ್ಯಾರಿಕೇಡ್‌ಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.

ಸಾವಿತ್ರಿ ಕಡಿ, ಬಿಆರ್‌ಟಿಎಸ್ ಎಂ.ಡಿ.